ನಕಲಿ ಚಿನ್ನ ಅಡವಿಟ್ಟು ₹28.87 ಲಕ್ಷ ಸಾಲ ಪಡೆದ ಜಾಲ ಬಯಲು ಶಿವಮೊಗ್ಗದಲ್ಲಿ ಐವರು ವಿರುದ್ಧ ಪ್ರಕರಣ.!?
ನಕಲಿ ಚಿನ್ನದ ಆಭರಣಗಳಿಗೆ ಬಂಗಾರದ ಲೇಪನ ಮಾಡಿ ವಿವಿಧ ಬ್ಯಾಂಕ್‌ಗಳು ಹಾಗೂ ಜ್ಯುವೆಲ್ಲರಿ ಅಂಗಡಿಯಲ್ಲಿ ಅಡವಿಟ್ಟು ಸುಮಾರು ₹28.87 ಲಕ್ಷ ಸಾಲ ಪಡೆದಿರುವ ಪ್ರಕರಣವನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಸವರ್ ಲೇನ್ ಶಾಖೆಯ ವ್ಯವಸ್ಥಾಪಕ ದಾರವತೋ ಕ್ರಾಂತಿಕುಮಾರ್ ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 239/2026ರಡಿ ಬಿಎನ್‌ಎಸ್-2023ರ ಕಲಂ 61(1), 318(4) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗಿದೆ.
ತನಿಖೆಯ ವೇಳೆ ಲೋಕೇಶ್ ಬಿ.ಜೆ. (39), ಬಿಳ್ಮನೆ ಅರೆಕಲ್ಲು ಗ್ರಾಮ, ತೀರ್ಥಹಳ್ಳಿ ತಾಲ್ಲೂಕು ಅವರನ್ನು ಬಂಧಿಸಲಾಯಿತು. ಆರೋಪಿಯ ಸ್ವಇಚ್ಛಾ ಹೇಳಿಕೆ ಆಧರಿಸಿ, ವಿವಿಧ ಬ್ಯಾಂಕ್‌ಗಳು ಮತ್ತು ಜ್ಯುವೆಲ್ಲರಿ ಅಂಗಡಿಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.
ಅಡವಿಟ್ಟಿರುವ ಸ್ಥಳಗಳು ಮತ್ತು ಪಡೆದಿರುವ ಸಾಲ
ಪಂಜಾಬ್ ನ್ಯಾಷನಲ್ ಬ್ಯಾಂಕ್, ಸವರ್ ಲೇನ್, ಶಿವಮೊಗ್ಗ: 163.300 ಗ್ರಾಂ – ₹7,62,557
ವರ್ತಕರ ಸೌಹಾರ್ದ ಸಹಕಾರಿ ಸಂಘ, ತೀರ್ಥಹಳ್ಳಿ: 75.844 ಗ್ರಾಂ – ₹9,33,000
ಸಿರಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್, ಆಲ್ಕೋಳ, ಶಿವಮೊಗ್ಗ: 75.010 ಗ್ರಾಂ – ₹7,43,000
ಡಿಸಿಸಿ ಬ್ಯಾಂಕ್, ಗೋಪಾಳ, ಶಿವಮೊಗ್ಗ: 48.280 ಗ್ರಾಂ – ₹1,79,000
ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸವರ್ ಲೇನ್, ಶಿವಮೊಗ್ಗ: 26.490 ಗ್ರಾಂ – ₹1,10,000
ಗುಲಾಬಿ ಜ್ಯುವೆಲ್ಲರಿ ವರ್ಕ್ಸ್, ನೇತಾಜಿ ಸರ್ಕಲ್, ಶಿವಮೊಗ್ಗ: 30.900 ಗ್ರಾಂ – ₹1,90,000
ಒಟ್ಟಾರೆ 419.824 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ₹28,87,237 ಸಾಲ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದಲ್ಲಿ ಆರೋಪಿಗಳು
ಲೋಕೇಶ್ ಬಿ.ಜೆ. (39), ಬಿಳ್ಮನೆ ಅರೆಕಲ್ಲು ಗ್ರಾಮ, ತೀರ್ಥಹಳ್ಳಿ
ಸುಧಾ ಹೆಚ್., ಮಲವಗೊಪ್ಪ, ಶಿವಮೊಗ್ಗ
ಎಸ್.ವೈ. ರವಿಶಂಕರ್, ಗೋಲ್ಡ್ ಅಪ್ರೈಸರ್, ಪಂಜಾಬ್ ನ್ಯಾಷನಲ್ ಬ್ಯಾಂಕ್
ರಾಹುಲ್ (26), ಬಗ್ಗೋಡಿಗೆ ಗ್ರಾಮ, ತೀರ್ಥಹಳ್ಳಿ
ಶರತ್, ವೈಟ್ ಗೋಲ್ಡ್ & ಬ್ರೈಟ್ ಗೋಲ್ಡ್ ಸಂಸ್ಥೆಯ ಮ್ಯಾನೇಜರ್, ತೀರ್ಥಹಳ್ಳಿ
ಪೊಲೀಸರು 419.824 ಗ್ರಾಂ ನಕಲಿ ಚಿನ್ನದ ಆಭರಣಗಳನ್ನು ಮಹಜರ್ ಮೂಲಕ ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳಾದ ಸುಧಾ, ರಾಹುಲ್ ಹಾಗೂ ಶರತ್ ಅವರು ಸಹ ಇದೇ ರೀತಿಯಲ್ಲಿ ಇತರೆ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಪಿಐ ಸತ್ಯನಾರಾಯಣ, ಪಿಎಸ್ಐ ನಾರಾಯಣ ಮಧುಗಿರಿ ಅವರ ನೇತೃತ್ವದಲ್ಲಿ ಎಎಸ್ಐ ಚೂಡಾಮಣಿ, ಸಿಬ್ಬಂದಿಗಳಾದ ಪುನೀತ್, ಸಂದೀಪ್, ಗುರುನಾಯ್ಕ, ರಾಜೇಶ್ ಗೌಡ ಪಾಟೀಲ್ ಹಾಗೂ ಪುಟ್ಟಮ್ಮ ಯಶಸ್ವಿಯಾಗಿ ನಡೆಸಿದ್ದಾರೆ.