ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಮಂಡ್ಲಿ ಮಾತಗಂಮ್ಮ ದೇವಾಲಯ ಸಮಿತಿಸಮಿತಿ ಸದಸ್ಯರು.
ಶಿವಮೊಗ್ಗ ನಗರದ ಕಲ್ಲೂರು ಬೂತಪ್ಪ ದೇವಸ್ಥಾನದ ಹಿಂಭಾಗದಲ್ಲಿ ಟ್ರ್ಯಾಕ್ಟರ್‌ವೊಂದು ಆಟೋಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಸ್ಥಳದಿಂದ ತೆರಳಿದ ಘಟನೆ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕನನ್ನು ಆಟೊದಿಂದ ಹೋರ ತೆಗೆದು ರಕ್ಷಸಿ ಸ್ಥಳೀಯರ ಸಮಯೋಚಿತ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಮಾಹಿತಿಯಂತೆ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಆಟೋ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಟ್ರ್ಯಾಕ್ಟರ್‌ವೊಂದು ಆಟೋಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿದ್ದು, ಚಾಲಕ ಆಟೋದಲ್ಲೆ ಸಿಲಿಕ್ಕಿದ್ದು ಅಪಘಾತದ ಬಳಿಕ ಟ್ರ್ಯಾಕ್ಟರ್ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದ್ದು, ಇದನ್ನು ಸ್ಥಳೀಯರು ಹಿಟ್ ಆ್ಯಂಡ್ ರನ್ ಪ್ರಕರಣವೆಂದು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಂಡ್ಲಿ ಮಾತಗಂಮ್ಮ ದೇವಾಲಯ ಸಮಿತಿಯ ಸದಸ್ಯರು ತಕ್ಷಣ ಗಾಯಗೊಂಡ ಆಟೋ ಚಾಲಕನ ನೆರವಿಗೆ ಧಾವಿಸಿದ್ದಾರೆ. ಗಾಯಾಳುವಿನ ಸ್ಥಿತಿಯನ್ನು ಗಮನಿಸಿ ವಿಳಂಬ ಮಾಡದೆ ಅವರನ್ನು ಆಸ್ಪತ್ರೆಗೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಮಿತಿ ಸದಸ್ಯರ ತ್ವರಿತ ಸ್ಪಂದನೆಯಿಂದ ಗಾಯಾಳುವಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಗಿದೆ. ಅಪಘಾತದ ಬಗ್ಗೆ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಟರ್ ಹಾಗೂ ಅದರ ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವೇಗ ನಿಯಂತ್ರಣ ಹಾಗೂ ಸಂಚಾರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಘಟನೆ ಕುರಿತು ಹೆಚ್ಚಿನ ಮಾಹಿತಿ ಹಾಗೂ ಟ್ರ್ಯಾಕ್ಟರ್ ಚಾಲಕನ ಗುರುತು ಪತ್ತೆಯಾಗಬೇಕಿದ್ದು, ಪೋಲಿಸ್ ಇಲಾಖೆಯಿಂದ ತನಿಖೆ ನಡೆಸಿದ ಬಳಿಕ ಪ್ರಕರಣದ ಸಂಪೂರ್ಣ ವಿವರ ಹೊರಬರಬೇಕಿದೆ.







