ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಪಟ್ಟು – ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ
ಶಿವಮೊಗ್ಗ: ಜಿಲ್ಲೆಯ ಡಿಸಿ ಕಚೇರಿ ಸಮೀಪ ರಾಮಿನಕೊಪ್ಪ ಗ್ರಾಮದ ನಿವಾಸಿ ರೈತ ನಾಗರಾಜ್ ಅವರು ಮರ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆತಂಕ ಮೂಡಿಸಿದೆ.
ಜಮೀನಿನ ಖಾತೆ ವರ್ಗಾವಣೆ ಮಾಡಿಸಿಕೊಡುವ ವಿಚಾರವಾಗಿ ತಹಶೀಲ್ದಾರ್‌ಗೆ ₹4 ಲಕ್ಷ ನೀಡಿದ್ದರೂ ಖಾತೆ ವರ್ಗಾವಣೆ ಆಗಿಲ್ಲ, ನೀಡಿದ ಹಣವೂ ವಾಪಸ್ ಬಂದಿಲ್ಲ ಎಂಬ ಆರೋಪವನ್ನು ನಾಗರಾಜ್ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ನಾಗರಾಜ್, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ಸಮಸ್ಯೆಯನ್ನು ಆಲಿಸಬೇಕು ಹಾಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಡಿಸಿ ಕಚೇರಿ ಸಮೀಪದ ಮರ ಏರಿ ಕುಳಿತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನಾಗರಾಜ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಿದ್ಧತೆ ನಡೆಸಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತನ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ನಾಗರಾಜ್ ಒತ್ತಾಯಿಸಿದ್ದಾರೆ.
₹4 ಲಕ್ಷ ಹಣ ನೀಡಿರುವುದು ಹಾಗೂ ಅಧಿಕಾರಿಯ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಅಧಿಕೃತ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
