ಮತದಾರರ ಪಟ್ಟಿಯಲ್ಲಿರುವ ಮೃತರ ಹೆಸರುಗಳು, ಸ್ಥಳ ಬದಲಾವಣೆಯಾಗಿರುವ ಮತದಾರರ ವಿವರಗಳು ಸೇರಿದಂತೆ ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸುವುದು ತಪ್ಪಾ ಎಂದು ಕಾಂಗ್ರೆಸ್ ಪಕ್ಷವನ್ನು
ಪ್ರಶ್ನಿಸುತ್ತೆನೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಾ. ಧನಂಜಯ್ ಸರ್ಜಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಈಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ಹೊಸದಾಗಿ ಆರಂಭವಾಗಿರುವುದಲ್ಲ. ಎಸ್‌ಐಆರ್ ಪ್ರಕ್ರಿಯೆ ಈ ಹಿಂದೆ 2000ನೇ ಇಸವಿಯಿಂದಲೂ ವಿವಿಧ ಹಂತಗಳಲ್ಲಿ ನಡೆಯುತ್ತಾ ಬಂದಿದೆ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಗುರುತಿಸಿ ಸರಿಪಡಿಸುವುದು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಗೆ ಅಗತ್ಯವಾಗಿದೆ. ಮೃತ ವ್ಯಕ್ತಿಗಳ ಹೆಸರುಗಳು ಪಟ್ಟಿಯಲ್ಲಿ ಮುಂದುವರಿಯುವುದು, ಮತದಾರರು ಸ್ಥಳಾಂತರಗೊಂಡಿದ್ದರೂ ಹಳೆಯ ವಿಳಾಸದಲ್ಲೇ ಹೆಸರು ಉಳಿಯುವುದು ಸೇರಿದಂತೆ ಹಲವು ಲೋಪದೋಷಗಳು ಕಂಡುಬಂದಲ್ಲಿ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿರುವುದು
ಸ್ವಾಗತ೯ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಅಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಟಿಎಂಸಿ ಗೆಲುವು ಸಾಧಿಸಿರುವ ಉದಾಹರಣೆಗಳೂ ಇವೆ ಎಂದು ಡಾ. ಸರ್ಜಿ ಹೇಳಿದರು. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ರಾಜಕೀಯವಾಗಿ ನೋಡುವ ಬದಲು, ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟರು.
ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಆಯುಕ್ತರ ಮೇಲೆ ಆರೋಪ ಹೊರಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಟೀಕಿಸಿದರು. ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ವಾಸ್ತವಾಂಶಗಳನ್ನು ಆಧರಿಸಿ ಚರ್ಚೆ ನಡೆಯಬೇಕು ಎಂದರು.
ಕಾಂಗ್ರೆಸ್ ನಾಯಕರು ಇತ್ತೀಚೆಗೆ ‘ವೋಟ್ ಚೋರಿ’ ಎಂಬ ಪದ ಬಳಸಿ ಆರೋಪ ಮಾಡುತ್ತಿದ್ದಾರೆ. ಆದರೆ ಮತದಾರರು ಯಾರಿಗೆ ಮತ ಹಾಕಬೇಕು ಎಂಬುದನ್ನು ಸ್ವತಂತ್ರವಾಗಿ ನಿರ್ಧರಿಸುತ್ತಾರೆ. ಜನರು ಭ್ರಷ್ಟಾಚಾರ ಅಥವಾ ಅಕ್ರಮಗಳಿಗೆ ಅವಕಾಶ ನೀಡುವವರನ್ನು ತಿರಸ್ಕರಿಸುವ ಮನೋಭಾವ ಬೆಳೆಸಿಕೊಂಡಿದ್ದಾರೆ ಎಂದು ಡಾ. ಸರ್ಜಿ ಹೇಳಿದರು.
ಇದೇ ವೇಳೆ ಇತ್ತೀಚೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಲಿಂಗಾಯತ ಮಠಾಧೀಶರ ಸಭೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಠಾಧೀಶರು ತಮ್ಮ ಸೇವೆ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು. ಧಾರ್ಮಿಕ ಸಂಸ್ಥೆಗಳು ಹಾಗೂ ಮಠಾಧೀಶರಿಗೆ ಗೌರವವಿದ್ದು, ಅವರ ಸ್ವತಂತ್ರ ಸ್ಥಾನಮಾನಕ್ಕೆ ಧಕ್ಕೆ ತರುವ ಯಾವುದೇ ರೀತಿಯ ಹೇಳಿಕೆ ಅಥವಾ ವ್ಯಾಖ್ಯಾನವನ್ನು ತಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಸಾರ್ವಜನಿಕ ಮಹತ್ವದ ವಿಚಾರಗಳಲ್ಲಿ ಚುನಾವಣಾ ಆಯೋಗ ಹಾಗೂ ಸಂಬಂಧಿಸಿದ ಅಧಿಕಾರಿಗಳು ನಿಯಮಾನುಸಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಪಕ್ಷ ಅಥವಾ ವ್ಯಕ್ತಿಯ ಒತ್ತಡಕ್ಕೆ ಒಳಗಾಗದೆ ವಾಸ್ತವಾಂಶಗಳ ಆಧಾರದ ಮೇಲೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಜಗದೀಶ್, ಹರಿಕೃಷ್ಣ, ಚಂದ್ರಶೇಖರ, ಮಂಜುನಾಥ್ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.





