ಶಿವಮೊಗ್ಗದಲ್ಲಿ ಪ್ರಕರಣ ದಾಖಲು.!ಶಿವಮೊಗ್ಗ: ಮದುವೆಯಾಗುವುದಾಗಿ ಭರವಸೆ ನೀಡಿ ಹೊರರಾಜ್ಯದ ಯುವತಿಯನ್ನು ವಂಚಿಸಿದ ಆರೋಪದಡಿ ಶಿವಮೊಗ್ಗ ನಗರದ ನಿವಾಸಿ ಶ್ರೀನಿಧಿ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಶ್ರೀನಿಧಿ ಯುವತಿಗೆ ಪ್ರೀತಿಯ ಹೆಸರಿನಲ್ಲಿ ಮದುವೆಯಾಗುವುದಾಗಿ ನಂಬಿಕೆ ಮೂಡಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿ ಗರ್ಭಿಣಿಯಾಗಿರುವುದು ತಿಳಿದ ನಂತರ ಮದುವೆಯಾಗಲು ನಿರಾಕರಿಸಿ ಸಂಪರ್ಕ ಕಡಿತಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಾನು ವಂಚನೆಗೆ ಒಳಗಾಗಿರುವುದಾಗಿ ಆರೋಪಿಸಿದ ಯುವತಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಹಾಗೂ ವಂಚನೆ ಸೇರಿದಂತೆ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲಾದ ಬಳಿಕ ಮಹಿಳಾ ಠಾಣೆ ಪೊಲೀಸರು ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ‘ಶ್ರೀ ಅನುರಾಧ ಕ್ರಿಯೇಷನ್’ ಅಂಗಡಿಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ದೂರಿನ ಪ್ರಕಾರ, ಘಟನೆ ಇದೇ ಸ್ಥಳದಲ್ಲಿ ನಡೆದಿರುವುದಾಗಿ ಆರೋಪಿಸಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಶ್ರೀನಿಧಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಪೊಲೀಸರು ನಡೆಸುತ್ತಿದ್ದಾರೆ.






