ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಮಕ್ಕಳಿಗೆ (Underprivileged Students) ಶಿಕ್ಷಣ ನೀಡುವುದು ಕೇವಲ ಕಾನೂನಿನ ನಿಯಮವಲ್ಲ, ಅದೊಂದು ‘ರಾಷ್ಟ್ರೀಯ ಮಿಷನ್’ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಸರ್ಕಾರದ ನಿಯಮದಂತೆ ಸೀಟು ಹಂಚಿಕೆಯಾದ ನಂತರ, ಖಾಸಗಿ ಶಾಲೆಗಳು (Private Schools) ಯಾವುದೇ ಕಾರಣ ನೀಡಿ ಬಡ ಮಕ್ಕಳ ಪ್ರವೇಶವನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಉತ್ತರ ಪ್ರದೇಶದ ಲಕ್ನೋದ ಖಾಸಗಿ ಶಾಲೆಯೊಂದು ಬಡ ಮಗುವಿಗೆ ಪ್ರವೇಶ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಸರ್ಕಾರದ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿ ಬಂದ ಮಕ್ಕಳ ಅರ್ಹತೆಯನ್ನು ಪ್ರಶ್ನಿಸುವ ಅಧಿಕಾರ ಶಾಲೆಗಳಿಗಿಲ್ಲ. ಒಮ್ಮೆ ಸರ್ಕಾರ ಮಗುವಿನ ಹೆಸರನ್ನು ಶಿಫಾರಸು ಮಾಡಿದರೆ, ಆ ಮಗುವಿಗೆ ಕೂಡಲೇ ಶಾಲೆಗಳು ಪ್ರವೇಶ ನೀಡಲೇಬೇಕು. ಒಂದು ವೇಳೆ ಶಾಲಾ ಮಂಡಳಿಗೆ ಏನಾದರೂ ಆಕ್ಷೇಪಗಳಿದ್ದರೆ, ಅದನ್ನು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತರಬಹುದೇ ಹೊರತು, ಮಗುವಿನ ಪ್ರವೇಶವನ್ನು ತಡೆಹಿಡಿಯುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ (RTE) ಖಾಸಗಿ ಶಾಲೆಗಳಲ್ಲಿ ಶೇ. 25 ರಷ್ಟು ಸೀಟುಗಳನ್ನು ಬಡ ಮಕ್ಕಳಿಗಾಗಿ ಮೀಸಲಿಡಲಾಗಿದೆ. ಇದು ಸಮಾಜದ ವಿವಿಧ ಸ್ತರದ ಮಕ್ಕಳನ್ನು ಒಗ್ಗೂಡಿಸುವ ಮತ್ತು ಸಮಾನತೆ ತರುವ ಒಂದು ಸಾಂವಿಧಾನಿಕ ಉದ್ದೇಶವಾಗಿದೆ. ಶಾಲೆಗಳು ತಮಗೆ ಇಷ್ಟ ಬಂದಂತೆ ಈ ನಿಯಮವನ್ನು ಅರ್ಥೈಸಿಕೊಂಡು ಮಕ್ಕಳ ಭವಿಷ್ಯದ ಜೊತೆ ಆಟವಾಡಬಾರದು. ಪ್ರವೇಶ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವುದು ಮಗುವಿನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಎಂದು ನ್ಯಾಯಪೀಠವು ಎಚ್ಚರಿಸಿದೆ.
ಬಡ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದಾಗ, ನ್ಯಾಯಾಂಗವು ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ಶಾಲೆಗಳು ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಮತ್ತು ಲಭ್ಯವಿರುವ ಸೀಟುಗಳ ವಿವರವನ್ನು ಮೊದಲೇ ಬಹಿರಂಗಪಡಿಸಬೇಕು ಎಂದು ಸೂಚಿಸಿದೆ. ಒಟ್ಟಾರೆಯಾಗಿ, ಯಾವುದೇ ಮಗುವು ಹಣದ ಕೊರತೆ ಅಥವಾ ಶಾಲಾ ಆಡಳಿತ ಮಂಡಳಿಯ ಹಠಮಾರಿ ಧೋರಣೆಯಿಂದ ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ಸುಪ್ರೀಂ ಕೋರ್ಟ್‌ನ ಆಶಯವಾಗಿದೆ.