ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

‎ಜ್ಯೋತಿನಗರ ಮುಖ್ಯರಸ್ತೆಗೆ ದಿಢೀರ್ ಬೇಲಿ: ನಿವಾಸಿಗಳ ಆಕ್ರೋಶ.!?

On: September 7, 2026 5:26 PM
Follow Us:
---Advertisement---

ಹಲವು ವರ್ಷಗಳಿಂದ ಸಾರ್ವಜನಿಕ ಬಳಕೆಯಲ್ಲಿದ್ದ ರಸ್ತೆಗೆ ತಡೆ — ಸೂಡಾ, ಪಾಲಿಕೆ ಹಾಗೂ ಪೊಲೀಸರ ಮಧ್ಯಪ್ರವೇಶಕ್ಕೆ ಆಗ್ರಹ

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಜ್ಯೋತಿನಗರದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸಾರ್ವಜನಿಕರು ಹಲವು ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ದಿಢೀರ್ ಬೇಲಿ ಹಾಕಿರುವ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ರೆವಿನ್ಯೂ ದಾಖಲೆಗಳಲ್ಲಿನ ಸುಮಾರು 13 ಗುಂಟೆ ಜಾಗದಲ್ಲಿ ರಸ್ತೆ ಹಾದು ಹೋಗಿದ್ದು, ಬಡಾವಣೆ ನಿರ್ಮಾಣದ ಸಮಯದಿಂದಲೂ ಈ ರಸ್ತೆಯನ್ನು ನಿವಾಸಿಗಳು ನಿರಂತರವಾಗಿ ಬಳಸಿಕೊಂಡು ಬರುತ್ತಿದ್ದಾರೆ. ಸೂಡಾ ಅನುಮೋದಿತ ದಾಖಲೆ, ನಕ್ಷೆ ಹಾಗೂ ತಮಗೆ ನೀಡಲಾಗಿರುವ ಬಡಾವಣೆ ನಕ್ಷೆಯಲ್ಲಿಯೂ ರಸ್ತೆ ನಮೂದಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಹೈಟೆನ್ಷನ್ ವಿದ್ಯುತ್ ತಂತಿಯ ಪಕ್ಕದಲ್ಲಿರುವ ಜಾಗಕ್ಕೆ ಸಂಬಂಧಿಸಿದಂತೆ ಖಾತೆ ರದ್ದುಗೊಳಿಸಿರುವ ವಿಚಾರವೂ ಬೆಳಕಿಗೆ ಬಂದಿದ್ದು, ಸ್ಥಳೀಯರು ಪಾಲಿಕೆಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ತಾವು ಬೇಲಿ ಹಾಕಿರುವುದಾಗಿ ತಿಪ್ಪೇಸ್ವಾಮಿ ಎಂಬವರು ಹೇಳುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಆದರೆ, ರಸ್ತೆಗೆ ಬೇಲಿ ಹಾಕಲು ನ್ಯಾಯಾಲಯದ ಆದೇಶವಿದ್ದರೆ ಅದರ ಪ್ರತಿ ನೀಡುವಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಕೇಳಿದಾಗ, ನ್ಯಾಯಾಲಯದ ಆದೇಶದ ಬದಲಿಗೆ ಜಿಪಿಎ ದಾಖಲೆ ಹಾಗೂ ಪಾಲಿಕೆ ಅಧಿಕಾರಿಯೊಬ್ಬರು ನೀಡಿರುವ ಪತ್ರವನ್ನು ತೋರಿಸಲಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.

ಹಲವು ವರ್ಷಗಳಿಂದ ಸಾರ್ವಜನಿಕ ಸಂಚಾರಕ್ಕೆ ಬಳಕೆಯಾಗುತ್ತಿದ್ದ ರಸ್ತೆಯನ್ನು ಏಕಾಏಕಿ ಬಂದ್ ಮಾಡಿರುವುದರಿಂದ ಮಕ್ಕಳು, ವೃದ್ಧರು, ರೋಗಿಗಳು ಸೇರಿದಂತೆ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ತುರ್ತು ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೂಡಾ ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಮತ್ತು ದಾಖಲೆಗಳ ಕುರಿತು ಪರಿಶೀಲನೆ ನಡೆಸಬೇಕು. ಸಾರ್ವಜನಿಕ ಬಳಕೆಯಲ್ಲಿರುವ ರಸ್ತೆಗೆ ಕಾನೂನುಬದ್ಧ ಅನುಮತಿ ಇಲ್ಲದೆ ಬೇಲಿ ಹಾಕಿದ್ದರೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

“ನಾವು ಈ ಬಡಾವಣೆಯಲ್ಲಿ ಲಕ್ಷಾಂತರ ರೂಪಾಯಿ ನೀಡಿ ನಿವೇಶನ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಈಗ ರಸ್ತೆಗೆ ಬೇಲಿ ಹಾಕಿರುವುದರಿಂದ ನಮ್ಮ ಸಂಚಾರವೇ ದುಸ್ತರವಾಗಿದೆ. ಮಕ್ಕಳ, ವೃದ್ಧರ ಹಾಗೂ ರೋಗಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು” ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Sathish munchemane

Join WhatsApp

Join Now

 

Read More

Leave a Comment