ಗಾಜನೂರು ತುಂತೂರು ರೆಸಾರ್ಟ್ ಮೇಲೆ ಅಬಕಾರಿ ದಾಳಿ: ಪರವಾನಗಿ ಇಲ್ಲದೆ ಮದ್ಯ ಸೇವನೆಗೆ ಅವಕಾಶ ಆರೋಪ
ಶಿವಮೊಗ್ಗ, ಆ.25: ಶಿವಮೊಗ್ಗ ತಾಲ್ಲೂಕಿನ ಗಾಜನೂರು ಗ್ರಾಮದ ತುಂತೂರು ರೆಸಾರ್ಟ್‌ನಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಆ.23ರಂದು ಅಬಕಾರಿ ಸಿಬ್ಬಂದಿಯೊಂದಿಗೆ ಗಾಜನೂರು ಗ್ರಾಮದ ಸದಾನಂದ ಆರ್. ಬಿನ್ ರಾಮಪ್ಪ ಗೌಡ ಅವರಿಗೆ ಸೇರಿದ ತುಂತೂರು ರೆಸಾರ್ಟ್ ಮೇಲೆ ನಿಯಮಾನುಸಾರ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸಾರ್ವಜನಿಕರಿಗೆ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ–1965ರ ಕಲಂ 15(ಎ) ಅಡಿಯಲ್ಲಿ ಅಪರಾಧವಾಗಿದ್ದು, ಕಲಂ 32(3) ರಡಿ ದಂಡಾರ್ಹವಾಗಿರುವುದಾಗಿ ಅಬಕಾರಿ ಇಲಾಖೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸ್ಥಳದಲ್ಲೇ ದಸ್ತಗಿರಿ ಮಾಡಿ, ಸೂಕ್ತ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆರೋಪಿತನ ವಿರುದ್ಧ ಮೊಕದ್ದಮೆ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ರೆಸಾರ್ಟ್ ನಡೆಸಲು ಅಗತ್ಯ ಪರವಾನಗಿಗಳಿವೆಯೇ?
ತುಂತೂರು ರೆಸಾರ್ಟ್‌ನಲ್ಲಿ ರೆಸಾರ್ಟ್, ಆಹಾರ ಸೇವೆ ಹಾಗೂ ಪಾರ್ಟಿ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿ ಮತ್ತು ಪರವಾನಗಿಗಳನ್ನು ಪಡೆದಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳೀಯ ಸಂಸ್ಥೆಯಿಂದ ವ್ಯಾಪಾರ ಪರವಾನಗಿ ಹಾಗೂ ಕಟ್ಟಡ ಬಳಕೆಗೆ ಸಂಬಂಧಿಸಿದ ಅನುಮತಿ, ಅನ್ವಯಿಸುವ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ನೋಂದಣಿ/ಅನುಮೋದನೆ, ಮದ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅಬಕಾರಿ ಇಲಾಖೆಯ ಪರವಾನಗಿ, ಆಹಾರ ತಯಾರಿಕೆ ಮತ್ತು ಮಾರಾಟಕ್ಕೆ ಆಹಾರ ಸುರಕ್ಷತಾ ಇಲಾಖೆಯ (FSSAI) ಪರವಾನಗಿ, ಕಟ್ಟಡದ ಸ್ವರೂಪಕ್ಕೆ ಅನುಗುಣವಾಗಿ ಅಗ್ನಿಶಾಮಕ ಇಲಾಖೆಯ ಸುರಕ್ಷತಾ ಅನುಮತಿ/NOC ಹಾಗೂ ಅನ್ವಯಿಸುವ ಪರಿಸರ ಮತ್ತು ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಸಂಬಂಧಿಸಿದ ಅನುಮತಿಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ಅಗತ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಅಗತ್ಯ ಸರ್ಕಾರಿ ಅನುಮತಿಗಳಿಲ್ಲದೆ ಕಾಕ್‌ಟೈಲ್ ಪಾರ್ಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ. ತೋಟದ ಮನೆಯನ್ನು ರೆಸಾರ್ಟ್ ಹೆಸರಿನಲ್ಲಿ ಬಾಡಿಗೆಗೆ ನೀಡಿ ರಾತ್ರಿ-ಹಗಲು ಪಾರ್ಟಿಗಳನ್ನು ನಡೆಸಲಾಗುತ್ತಿದೆ ಎಂಬ ದೂರೂ ಇದೆ. ಈ ಆರೋಪಗಳ ಸತ್ಯಾಸತ್ಯತೆ ದಾಖಲೆಗಳ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆಯಿಂದ ಸ್ಪಷ್ಟವಾಗಬೇಕಿದೆ.
ತುಂಗಾ ನದಿ ತಟ ಒತ್ತುವರಿ ಆರೋಪ
ಇದಲ್ಲದೆ, ತುಂಗಾ ನದಿ ತಟಕ್ಕೆ ಹೊಂದಿಕೊಂಡಿರುವ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಎತ್ತರದ ಟವರ್ ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ.!? ಗಾಜನೂರು ಗ್ರಾಮಸ್ಥರು ಮಾಡಿದ್ದಾರೆ. ಈ ಕುರಿತು ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ, ಭೂ ದಾಖಲೆ, ಕಟ್ಟಡ ಅನುಮತಿ ಮತ್ತು ನದಿ ತಟಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರೆಸಾರ್ಟ್‌ಗೆ ಅಗತ್ಯವಿರುವ ಪರವಾನಗಿಗಳು ನಿಜವಾಗಿಯೂ ಪಡೆಯಲಾಗಿದೆಯೇ, ಅನುಮೋದಿತ ಉದ್ದೇಶಕ್ಕೆ ಅನುಗುಣವಾಗಿಯೇ ಕಟ್ಟಡ ಮತ್ತು ಚಟುವಟಿಕೆಗಳು ನಡೆಯುತ್ತಿವೆಯೇ ಹಾಗೂ ತುಂಗಾ ನದಿ ತಟಕ್ಕೆ ಸಂಬಂಧಿಸಿದ ಯಾವುದೇ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟಪಡಿಸಬೇಕಾಗಿದೆ.
ಅಬಕಾರಿ ದಾಳಿ ಪ್ರಕರಣ ಈಗಾಗಲೇ ನ್ಯಾಯಾಲಯದ ಹಂತಕ್ಕೆ ಹೋಗಿರುವ ಹಿನ್ನೆಲೆಯಲ್ಲಿ, ಉಳಿದ ಆರೋಪಗಳ ಬಗ್ಗೆಯೂ ಅಧಿಕೃತ ತನಿಖೆ ಹಾಗೂ ದಾಖಲೆಗಳ ಪರಿಶೀಲನೆಯ ನಂತರವೇ ಮುಂದಿನ ಯಾವ ಕಾನೂನು ಕ್ರಮ ಜಿಲ್ಲಾಡಳಿತ ಜರುಗಿಸುತ್ತದೆ ಎಂದು ಕಾದು ನೋಡಿ ಕ್ರಮ ಕೈಗೊಳ್ಳಲು ವಿಪಲವಾದರೆ ಕಾನೂನು ಹೋರಾಟಕ್ಕೆ ಪತ್ರಿಕೆ ಸಜ್ಜಾಗಿದೆ.










