ಬೆಂಗಳೂರು: ರಾಜಕಾರಣದಲ್ಲಿ ಮತವೆಂದರೆ ಕೇವಲ ಒಂದು ಗುರುತು ಹಾಕುವ ಕ್ರಿಯೆಯಲ್ಲ. ಅದು ಕೆಲವೊಮ್ಮೆ ಒಂದು ಸಂದೇಶ. ಕೆಲವೊಮ್ಮೆ ಒಂದು ಸಂಬಂಧ. ಮತ್ತೊಮ್ಮೆ ರಾಜಕೀಯ ಲೆಕ್ಕಾಚಾರದ ಸುಳಿವು. ಈಗ ಅಂತಹದ್ದೇ ಒಂದು ಪ್ರಶ್ನೆ ಬೆಂಗಳೂರಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ “ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್” ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕೆಎಸ್‌ಸಿಎ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಿ.ಎಸ್. ಅರುಣ್ ಅವರಿಗೆ ತಾವು ಮತ ಚಲಾಯಿಸಿ ಬೆಂಬಲ ನೀಡಿದ್ದನ್ನು ಬಹಿರಂಗವಾಗಿ ಸ್ಮರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇಲ್ಲೇ ಕುತೂಹಲ ಆರಂಭವಾಗುತ್ತದೆ.
ರಾಜಕೀಯದಲ್ಲಿ ಪಕ್ಷಗಳ ನಡುವೆ ಸ್ಪರ್ಧೆ ಸಹಜ. ಕಾಂಗ್ರೆಸ್‌ಗೆ ಬಿಜೆಪಿ ಎದುರಾಳಿ. ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಎದುರಾಳಿ. ಚುನಾವಣಾ ವೇದಿಕೆಗಳಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತವೆ. ಆದರೆ ಸಂಘ-ಸಂಸ್ಥೆಗಳ ಚುನಾವಣೆಯಲ್ಲಿ ವೈಯಕ್ತಿಕ ಪರಿಚಯ, ಸ್ನೇಹ, ಅರ್ಹತೆ ಮತ್ತು ನಂಬಿಕೆಗಳಿಗೆ ಪಕ್ಷದ ಬಣ್ಣ ಅಷ್ಟಾಗಿ ಅಂಟಿಕೊಳ್ಳುವುದಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಚರ್ಚೆಗೆ ತಂದಿದೆ.
ಹಾಗಾದರೆ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಬೇಧ ಮರೆತು ಡಿ.ಎಸ್. ಅರುಣ್ ಅವರಿಗೆ ಮತ ಹಾಕಿದ್ದಾರೆಯೇ?
ಹೌದಾದರೆ, ಇದು ರಾಜಕೀಯ ನಿಲುವಿನ ಬದಲಾವಣೆಯೇ? ಅಥವಾ ಕ್ರೀಡಾ ಆಡಳಿತದ ಚುನಾವಣೆಯನ್ನು ರಾಜಕೀಯದಿಂದ ದೂರವಿಡಬೇಕು ಎಂಬ ಸಂದೇಶವೇ? ಇಲ್ಲವೇ ಅರುಣ್ ಅವರ ವೈಯಕ್ತಿಕ ಸಂಬಂಧ ಮತ್ತು ಸಂಘಟನಾ ಸಾಮರ್ಥ್ಯದ ಮೇಲಿನ ನಂಬಿಕೆಯೇ?
ಒಬ್ಬ ರಾಜಕಾರಣಿ ಯಾರಿಗೆ ಮತ ಹಾಕಿದರು ಎಂಬುದು ಸಾಮಾನ್ಯವಾಗಿ ಅವರ ವೈಯಕ್ತಿಕ ಹಕ್ಕು. ಆದರೆ ಆ ಮತವನ್ನು ಸಾರ್ವಜನಿಕ ವೇದಿಕೆಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಾಗ, ಅದರ ರಾಜಕೀಯ ಅರ್ಥವನ್ನು ಜನರು ಹುಡುಕುವುದು ಸಹಜ.
ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ಇದೀಗ ಒಂದು ಸರಳ ಪ್ರಶ್ನೆಯನ್ನು ಮಾತ್ರವಲ್ಲ, ಹಲವು ರಾಜಕೀಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಕ್ಷದ ವೇದಿಕೆಯಲ್ಲಿ ಎದುರಾಳಿಯಾಗಿರುವ ವ್ಯಕ್ತಿಗೆ, ಪಕ್ಷದ ಹೊರಗಿನ ಚುನಾವಣೆಯಲ್ಲಿ ಬೆಂಬಲ ನೀಡುವುದು—ಇದು ರಾಜಕೀಯ ಪ್ರಬುದ್ಧತೆಯೇ? ವೈಯಕ್ತಿಕ ವಿಶ್ವಾಸವೇ? ಅಥವಾ ಮುಂದಿನ ದಿನಗಳ ಯಾವುದಾದರೂ ಹೊಸ ಸಮೀಕರಣದ ಮುನ್ಸೂಚನೆಯೇ?
ಉತ್ತರ ಯಾರ ಬಳಿ ಇದೆ ಎಂಬುದು ಗೊತ್ತಿಲ್ಲ. ಆದರೆ ಒಂದುಮಾತಂತೂ ಕುತೂಹಲ.?







