ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಬಿದರಿ ಅವರು, ಸಮಾಜದ ಏಕತೆ, ಸಂಘಟನೆ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮಹತ್ವವನ್ನು ಒತ್ತಿ ಹೇಳಿದರು.
“ಉಳ್ಳವರು ಶಿವಾಲಯಗಳನ್ನು ನಿರ್ಮಿಸುತ್ತಾರೆ. ಆದರೆ ಎಲ್ಲರಿಗೂ ಆರ್ಥಿಕ ಸಾಮರ್ಥ್ಯ ಇರಬೇಕೆಂದಿಲ್ಲ. ದೇವಾಲಯ ಕಟ್ಟಲು ಸಾಧ್ಯವಾಗದವರು ಸಮಾಜ ಸಂಘಟನೆ ಕಟ್ಟುವ ಕೆಲಸ ಮಾಡಬೇಕು. ದಾನ-ಧರ್ಮ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಹಾಳಾದರೆ ಎಷ್ಟೇ ಆಸ್ತಿ ಇದ್ದರೂ ಪ್ರಯೋಜನವಿಲ್ಲ” ಎಂದು ಹೇಳಿದರು.
ವೀರಶೈವ ಸಮಾಜದಲ್ಲಿ ಒಳಪಂಗಡಗಳ ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು. 99 ವೃತ್ತಿಗಳನ್ನು ಹೊಂದಿರುವ ನಮ್ಮ ಸಮಾಜ ಒಗ್ಗಟ್ಟಾಗಿದ್ದಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಅವರು ಕರೆ ನೀಡಿದರು.
ರಾಜ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಮಹಾಸಭೆ ಪ್ರತಿವರ್ಷ ಸುಮಾರು ₹2 ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದ ಅವರು, ಸಮಾಜದ ಪ್ರತಿಯೊಬ್ಬರೂ ಪರಸ್ಪರ ಗೌರವ, ಪ್ರೀತಿ ಮತ್ತು ಸಹಕಾರದಿಂದ ಬದುಕಬೇಕು ಎಂದರು.
“ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದು ವೈಯಕ್ತಿಕ ವಿಚಾರ. ಆದರೆ ಸಮಾಜದ ಪರವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕು. ಮಹಾಸಭೆ ರಾಜಕೀಯ ಸಂಘಟನೆಯಲ್ಲ; ಸಮಾಜದ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ” ಎಂದು ಸ್ಪಷ್ಟಪಡಿಸಿದರು.
ಸಮಾಜದ ಸದಸ್ಯರು ತಮ್ಮ ವಾರ್ಷಿಕ ಆದಾಯದ 2 ಶೇಕಡಾವನ್ನು ಮಹಾಸಭೆಗೆ ಕೊಡುಗೆಯಾಗಿ ನೀಡುವ ಮನೋಭಾವ ಬೆಳೆಸಬೇಕು ಎಂದು ಮನವಿ ಮಾಡಿದ ಅವರು, ಸಮಾಜದ ಅಭಿವೃದ್ಧಿಗೆ ಸರ್ಕಾರವನ್ನೇ ಅವಲಂಬಿಸದೆ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುವ ಅಗತ್ಯವಿದೆ ಎಂದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಬೇಕು. ಯಾವುದೇ ಬಾಲಕಿ ಶಿಕ್ಷಣದಿಂದ ವಂಚಿತರಾಗದಂತೆ ಸಮಾಜವೇ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಹಾಸಭೆಯ ಘಟಕಗಳನ್ನು ಇನ್ನಷ್ಟು ಬಲಪಡಿಸಿ, ಜವಾಬ್ದಾರಿಗಳನ್ನು ಹಂಚುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವಲಿಂಗ ಮಹಾಸ್ವಾಮಿಗಳು, ಅಮರೇಗೌಡ ಬೈಯಪುರ (ರಾಜ್ಯ ಉಪಾಧ್ಯಕ್ಷರು), ನಾಗಠಾಣದ ನಟರಾಜ್, ಸಿದ್ದರಾಮಪ್ಪ ಉಪ್ಪಿನ, ಶ್ರೀಮತಿ ರಾಜೇಶ್ವರಿ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ ರಾಜಶೇಖರ, ಮಲ್ಲಿಕಾರ್ಜುನ ಸ್ವಾಮಿ, ಸೋಮನಾಥ, ಮಲ್ಲಿಕಾರ್ಜುನ ಕಾನೂರು,ಸಚ್ಚಿನ್, ವಿಕ್ರಮ್, ಪರಮೇಶ,ಉಮೇಶ್ ಕತ್ತಿಗಿ, ಸತೀಶ್ ಮುಂಚೆಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.






