ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಲಂಕೇಶ್ ಪತ್ರಿಕೆ ಮಾಡುತ್ತಿತ್ತು: ಕತ್ತಿಗೆ ಚನ್ನಪ್ಪ

On: October 15, 2026 9:03 PM
Follow Us:
---Advertisement---

ಶಿವಮೊಗ್ಗ: ಇಂದಿನ ಮಾಧ್ಯಮಗಳು ಜನರ ಮನಸ್ಥಿತಿ ಕೆಡಿಸುವ ಬದಲು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಹಿಂದಿನ ಕಾಲದಲ್ಲಿ ಲಂಕೇಶ್ ಪತ್ರಿಕೆ ಸಮಾಜದಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಸಾಹಿತಿಗಳು ಹಾಗೂ ಬರಹಗಾರರಿಗೆ ವೇದಿಕೆ ಕಲ್ಪಿಸಿತ್ತು ಎಂದು ಕತ್ತಿಗೆ ಚನ್ನಪ್ಪ ಅಭಿಪ್ರಾಯಪಟ್ಟರು.

ನಗರದ ಮಥುರಾ ಪ್ಯಾರಡೈಸ್‌ನಲ್ಲಿ ಕೆ.ಬಿ.ಸಿ. ಸೇವಾ ಟ್ರಸ್ಟ್ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಲಿಂ. ದೊಡ್ಡಬಸಪ್ಪ ಬಿಷ್ಠಾಳ್ ಮತ್ತು ಲಿಂ. ಹಳ್ಳಮ್ಮ ದತ್ತಿ ಹಾಗೂ ಶ್ರೀ ಕತ್ತಿಗೆ ಬಿ. ಚನ್ನಪ್ಪ ಮತ್ತು ಶ್ರೀಮತಿ ಸಾವಿತ್ರಮ್ಮ ದತ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಂಕೇಶ್ ಪೂರ್ವಜರ ಇತಿಹಾಸವನ್ನು ಸ್ಮರಿಸಿದ ಕತ್ತಿಗೆ ಚನ್ನಪ್ಪ, ಹರಿಹರದ ಪಾಳ್ಯ ಪ್ರದೇಶದ ತುಂಗಭದ್ರಾ ನದಿ ತೀರದ ಚಿಕ್ಕ ಹಳ್ಳಿಯಲ್ಲಿ ಲಂಕೇಶ್ ಪೂರ್ವಜರು ವಾಸಿಸುತ್ತಿದ್ದರು. ಅಂದಿನ ಕಾಲದಲ್ಲಿ ರಾಜರ ನಡುವೆ ಯುದ್ಧಗಳು ನಡೆಯುತ್ತಿದ್ದವು. ರೋಗರುಜಿನ ಹಾಗೂ ಇತರ ಸಂಕಷ್ಟಗಳಿಂದ ಜನರು ತಮ್ಮ ಊರುಗಳನ್ನು ತೊರೆದು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಲಂಕೇಶ್ ವಂಶಸ್ಥರು ಶಿವಮೊಗ್ಗ ತಾಲೂಕಿನ ಕೊನಗವಳ್ಳಿಗೆ ಬಂದು ನೆಲೆಸಿದರು ಎಂದು ತಿಳಿಸಿದರು.

ಲಂಕೇಶ್ ಅವರ ಬದುಕು ಮತ್ತು ಸಾಹಿತ್ಯವನ್ನು ಹತ್ತಿರದಿಂದ ಕಂಡವರು ಹಾಗೂ ಅವರ ಬರಹಗಳನ್ನು ಓದಿದವರು ಚರ್ಚೆಯಲ್ಲಿ ಭಾಗವಹಿಸಿದ್ದಿರಿ ಒಂದು ಅಥವಾ ಎರಡು ಪ್ರಶ್ನೆಗಳನ್ನು ಕೇಳಿದರೆ ಚಂದ್ರಶೇಖರ್ ತಾಳ್ಯ ಅವರು ಉತ್ತರಿಸಬಲ್ಲರು. ಉಪನ್ಯಾಸ ಏಕಮುಖವಾಗಿರಬಾರದು; ವಿಚಾರ ವಿನಿಮಯಕ್ಕೆ ಅವಕಾಶವಿರಬೇಕು ಎಂಬುದು ತಮ್ಮ ಉದ್ದೇಶ ಎಂದು ಹೇಳಿದರು.

ಹಿಂದಿನ ಅನುಭವ ಮಂಟಪದಲ್ಲಿ ಎಲ್ಲರೂ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದರು. ಸಾಹಿತಿಗಳ ನಡುವೆ ಬರವಣಿಗೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ಪ್ರೀತಿ, ಗೌರವ ಇರುತ್ತಿತ್ತು. ಚಂಪಾ ಅವರು ಲಂಕೇಶ್ ಅವರ ಬರವಣಿಗೆಯನ್ನು ವಿರೋಧಿಸುತ್ತಿದ್ದರೂ ಇಬ್ಬರ ನಡುವೆ ಆತ್ಮೀಯತೆ ಇತ್ತು. ಲಂಕೇಶ್ ಪತ್ರಿಕೆಯ ಮೂಲಕ ಭಾನು ಮುಸ್ತಕ  ರವೀಂದ್ರ ರೇಷ್ಮೆ, ನಟರಾಜ್ ಹುಳಿಯಾರ್ ಸೇರಿದಂತೆ ಅನೇಕ ಸಾಹಿತಿಗಳು ಮತ್ತು ಬರಹಗಾರರು ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳನ್ನೂ ಸತ್ಯವೆಂದು ನಂಬಬಾರದು. ಜನರ ಮನಸ್ಥಿತಿಯನ್ನು ಕೆಡಿಸುವ ರೀತಿಯ ಸುದ್ದಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ಸುದ್ದಿಗಳಿಂದ ಆಕ್ರೋಶಗೊಂಡು ದೂರದರ್ಶನಗಳನ್ನು ಒಡೆದುಹಾಕಿದ ಘಟನೆಗಳ ಬಗ್ಗೆಯೂ ಕೇಳಿದ್ದೇವೆ. ಆದ್ದರಿಂದ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು. ಲಂಕೇಶ್ ಪತ್ರಿಕೆಯ ಕಾರ್ಯವೈಖರಿಯಿಂದ ಇಂದಿನ ಪತ್ರಿಕೆಗಳು ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಹೇಳಿದರು.

ಹಿಂದೆ ಲಂಕೇಶ್ ಅವರನ್ನು ಭೇಟಿಯಾಗಲು ಅವರ ಕಚೇರಿಗೆ ತೆರಳಿದ ಸಂದರ್ಭದಲ್ಲಿ ನಡೆದ ಘಟನೆಯನ್ನು ಸ್ಮರಿಸಿದ ಅವರು, ತಮ್ಮ ಹೆಸರಿನ ಚೀಟಿ ನೀಡಿದ ಬಳಿಕ ಭೇಟಿಗೆ ಅವಕಾಶ ದೊರೆತ ಪ್ರಸಂಗವನ್ನು ವಿವರಿಸಿದರು. ರಾಜಕಾರಣಿಗಳಿಗೆ ಕರೆ ಮಾಡಿ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಹೇಳಿದಾಗ, ಅದರ ಉದ್ದೇಶವನ್ನು ವಿವರವಾಗಿ ತಿಳಿಯದಿದ್ದರೂ ಅವರು ಲಂಕೇಶ್ ಮಾತಿಗೆ ಗೌರವ ನೀಡಿ ಒಪ್ಪಿಕೊಳ್ಳುತ್ತಿದ್ದ ಸಂದರ್ಭಗಳೂ ಇದ್ದವು ಎಂದರು.

ಕನ್ನಡಿಗರ ಇತಿಹಾಸ ಮತ್ತು ಕೊಡುಗೆಗಳನ್ನು ಸ್ಮರಿಸಿದ ಅವರು, ಛತ್ರಪತಿ ಶಿವಾಜಿಯವರ ವಂಶದ ರಕ್ಷಣೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದ ಕುರಿತು ಪ್ರಸ್ತಾಪಿಸಿದರು. ಇತಿಹಾಸದಲ್ಲಿ ಕನ್ನಡಿಗರು ನೀಡಿದ ಸಹಕಾರ ಮತ್ತು ತ್ಯಾಗಗಳನ್ನು ಸಮರ್ಪಕವಾಗಿ ದಾಖಲಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರಮಾಡಲು ಇಂತಹ ವಿಚಾರಗಳ ಕುರಿತು ಚರ್ಚೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧೀಜಿಯವರು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭ ಹಾಗೂ ಬೆಳ್ಳಿಗಾವಿಗೆ ತೆರಳಿದ್ದ ವಿಚಾರವನ್ನೂ ಸ್ಮರಿಸಿದ ಅವರು, ಹಿಂದಿನ ಪತ್ರಿಕೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ವದ ಕೆಲಸ ಮಾಡುತ್ತಿದ್ದವು. ಇಂದಿನ ಪತ್ರಿಕೆಗಳೂ ಅದೇ ರೀತಿಯ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಭಾಗವಹಿಸಿದ್ದರು. ಸಂಘಟನೆ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಬಸವ ಪುರಸ್ಕಾರ–2026 ಪ್ರಶಸ್ತಿ ಪಡೆದ ಸಿ.ಎಸ್. ಷಡಾಕ್ಷರಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಸಾಹಿತಿ ಚಂದ್ರಶೇಖರ್ ತಾಳ್ಯ, ಬಸವೇಶ್ವರ ಸೊಸೈಟಿ ಅಧ್ಯಕ್ಷ ಬಳ್ಳೇಕೆರೆ ಸಂತೋಷ್, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಲವಕುಮಾರ್ ಸ್ವಾಮಿ, ರುದ್ರುಮುನಿ ಸಜ್ಜನ್, ಭೂಕಾಂತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Sathish munchemane

Join WhatsApp

Join Now

 

Read More

Leave a Comment