SCSP/TSP ಮಾದರಿಯಲ್ಲಿ ಪ್ರತ್ಯೇಕ ಉಪಯೋಜನೆ ಕಾಯ್ದೆ ಜಾರಿಗೆ ತರಲು ರಘು ಕೌಟಿಲ್ಯ ಒತ್ತಾಯ
ಶಿವಮೊಗ್ಗ: ರಾಜ್ಯದ ಅತೀ ಹಿಂದುಳಿದ ವರ್ಗಗಳು, ಅಲೆಮಾರಿ ಹಾಗೂ ಸಾಂಪ್ರದಾಯಿಕ ಕಾಯಕ ಆಧಾರಿತ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ವಾರ್ಷಿಕ ಕನಿಷ್ಠ ₹25 ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆಗ್ರಹಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಬಾರ, ಕಮ್ಮಾರ, ಬಡಗಿ, ಕ್ಷೌರಿಕ, ನೇಕಾರ, ಗಾಣಿಗ, ವಿಶ್ವಕರ್ಮ, ಮಡಿವಾಳ, ಹಡಪದ, ಉಪ್ಪಾರ, ಬೆಸ್ತ, ಗೊಲ್ಲ ಸೇರಿದಂತೆ ಹಲವು ಸಾಂಪ್ರದಾಯಿಕ ಕಾಯಕ ಸಮುದಾಯಗಳು ಗ್ರಾಮೀಣ ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬಾಗಿ ಶ್ರಮಿಸುತ್ತಿವೆ. ಆದರೆ ಇಂದಿಗೂ ಈ ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೀವ್ರ ಹಿಂದುಳಿದ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.
ಆಧುನಿಕತೆ, ಯಾಂತ್ರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಸಾಂಪ್ರದಾಯಿಕ ವೃತ್ತಿಗಳು ಸಂಕಷ್ಟಕ್ಕೆ ಸಿಲುಕಿವೆ. ವಲಸಿಗರಿಂದಲೂ ಸಾಂಪ್ರದಾಯಿಕ ವೃತ್ತಿಗಳಿಗೆ ಪೈಪೋಟಿ ಎದುರಾಗಿದ್ದು, ಕೃಷಿ ಭೂಮಿಯೂ ಇಲ್ಲದೆ, ಕುಲಕಸುಬನ್ನೂ ಮುಂದುವರಿಸಲಾಗದೆ ಅನೇಕ ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿವೆ. ಬಡತನ, ವಲಸೆ, ಅಲೆಮಾರಿ ಜೀವನ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಈ ಸಮುದಾಯಗಳ ಯುವಜನರಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವಕಾಶಗಳು ಕಡಿಮೆಯಾಗಿವೆ ಎಂದರು.
ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಕಡ್ಡಾಯವಾಗಿ ಮೀಸಲಿಡಲು ಹಾಗೂ ಮೀಸಲಿಟ್ಟ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗದಂತೆ ತಡೆಯಲು ಶಾಸನಬದ್ಧ ಕಾಯ್ದೆ ರೂಪಿಸುವುದು ಅಗತ್ಯವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗಳ ಮಾದರಿಯಲ್ಲಿ **’ಕರ್ನಾಟಕ ಅತೀ ಹಿಂದುಳಿದ ಮತ್ತು ಕಾಯಕ ಸಮುದಾಯಗಳ ಉಪಯೋಜನೆ ಕಾಯ್ದೆ’**ಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಾಂಪ್ರದಾಯಿಕ ವೃತ್ತಿಗಳ ಪುನಶ್ಚೇತನಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಖರೀದಿಗೆ ಶೇ.90ರಷ್ಟು ಸಹಾಯಧನ, ಬಡ್ಡಿರಹಿತ ಸಾಲ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಭೂರಹಿತ ಕಾಯಕ ಮತ್ತು ಅಲೆಮಾರಿ ಕುಟುಂಬಗಳಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿ, ಪ್ರತಿ ಕುಟುಂಬಕ್ಕೂ ಶಾಶ್ವತ ವಸತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಕ್ಷಣ ಬಿಡುಗಡೆಗೊಳಿಸಿ, ಅತೀ ಹಿಂದುಳಿದ ಸಮುದಾಯಗಳ ನೈಜ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಾಗೂ ಬಜೆಟ್ ಅನುದಾನ ಹಂಚಿಕೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕುಬೇರಪ್ಪ, ಜಿಲ್ಲಾಧ್ಯಕ್ಷ ಸುಧಾಕರ್, ಜಿಲ್ಲಾ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್., ಮಂಜುನಾಥ್ ಎನ್., ಪ್ರಮುಖರಾದ ಲೋಕೇಶ್, ಪ್ರಭಾಕರ್, ಸಂತೋಷ್ ಶೇಟ್, ರಂಗನಾಥ್, ಪ್ರದೀಪ್ ಹೊನ್ನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.