ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸದಾ ಬೆಂಬಲ: ಬಿ.ಎಸ್. ಯಡಿಯೂರಪ್ಪ
ಶಿವಮೊಗ್ಗ ನಗರದ ಡಿವಿಜನ್ ವೀರಶೈವ ಲಿಂಗಾಯತ ವಿದ್ಯಾರ್ಥಿನಿಲಯ ವಿಶ್ವಸ್ಥ ಮಂಡಳಿ ಹಾಗೂ ಎನ್‌ಡಿವಿ ಹಾಸ್ಟೆಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ನೂತನ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿನಿಲಯದ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಅಲ್ಲಮಪ್ರಭು, ಅಕ್ಕಮಹಾದೇವಿ, ಕುವೆಂಪು, ಶಾಂತವೇರಿ ಗೋಪಾಲಗೌಡರಂತಹ ಅನೇಕ ಮಹನೀಯರನ್ನು ನಾಡಿಗೆ ನೀಡಿರುವ ಪುಣ್ಯಭೂಮಿ. ಶಿವಮೊಗ್ಗವೇ ತಮ್ಮ ಕರ್ಮಭೂಮಿಯಾಗಿದ್ದು, ತಮ್ಮ ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಜಿಲ್ಲೆಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಸಾರ್ವಜನಿಕ ಜೀವನಕ್ಕೆ ಬಂದ ಆರಂಭದ ದಿನಗಳಲ್ಲಿ ಹಳ್ಳಿಗಳಿಂದ ದೂರದ ಶಿವಮೊಗ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ವಿದ್ಯಾರ್ಥಿಗಳು ವಸತಿ ಹಾಗೂ ಊಟದ ವ್ಯವಸ್ಥೆಯಿಲ್ಲದೆ ಎದುರಿಸುತ್ತಿದ್ದ ಕಷ್ಟಗಳನ್ನು ತಾವು ಹತ್ತಿರದಿಂದ ಕಂಡಿದ್ದಾಗಿ ಸ್ಮರಿಸಿದರು. ಯಾವುದೇ ಮಗು ವಸತಿ ಅಥವಾ ಊಟದ ಕೊರತೆಯಿಂದ ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ತಮ್ಮ ಆಶಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಯಡಿಯೂರಪ್ಪ, “ಜೀವನದಲ್ಲಿ ಕಷ್ಟಗಳು ಬಂದಾಗ ಧೃತಿಗೆಡಬೇಡಿ. ಪರಿಶ್ರಮ, ನಿಷ್ಠೆ ಮತ್ತು ಸಮಾಜಮುಖಿ ಆಲೋಚನೆಯೊಂದಿಗೆ ಮುನ್ನಡೆದರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯ” ಎಂದು ಹೇಳಿದರು.
ಶತಮಾನ ಪೂರೈಸಿರುವ ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ತಮ್ಮ ಹೆಸರನ್ನು ಇಟ್ಟಿರುವುದು ವೈಯಕ್ತಿಕವಾಗಿ ದೊಡ್ಡ ಗೌರವ ಎಂದು ಭಾವಿಸುವುದಾಗಿ ತಿಳಿಸಿದ ಅವರು, ಈ ಗೌರವವನ್ನು ತಮ್ಮ ಹೆಸರಿಗಿಂತಲೂ ಶಿವಮೊಗ್ಗ ಜನತೆ ನೀಡಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದ ಪ್ರತೀಕವಾಗಿ ಸ್ವೀಕರಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ,
ಯಡಿಯೂರಪ್ಪ ನೀಡಿದ ₹5 ಕೋಟಿ ಅನುದಾನದಿಂದ ನೂತನ ಕಟ್ಟಡ
ಶಿವಮೊಗ್ಗ ನಗರದಲ್ಲಿ ವೀರಶೈವ ಲಿಂಗಾಯತ ಸಮಾಜದ ಪಾಲಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ನೂತನ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2021ರಲ್ಲಿ ₹5 ಕೋಟಿ ಅನುದಾನ ನೀಡುವುದರೊಂದಿಗೆ ಶಿಲಾನ್ಯಾಸ ನೆರವೇರಿಸಿದ್ದರು ಎಂದು ಹೇಳಿದರು.
ಆರಂಭದಲ್ಲಿ ಲಭ್ಯವಿದ್ದ ₹1.70 ಕೋಟಿ ಅನುದಾನದಿಂದ ಹಾಸ್ಟೆಲ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಬೆಂಗಳೂರಿನ ಖ್ಯಾತ ಕಟ್ಟಡ ವಿನ್ಯಾಸಗಾರ ಚಿದಾನಂದ ಅವರ ವಿನ್ಯಾಸದೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಬಾರಂದೂರು ಪ್ರಕಾಶ್, ಸಿವಿಲ್ ಇಂಜಿನಿಯರ್ ರಾಜಣ್ಣ ಹಾಗೂ ನಿವೃತ್ತ ಇಂಜಿನಿಯರ್ ಉಮೇಶ್ ಅವರ ಸೇವೆಯನ್ನು ರುದ್ರೇಗೌಡ ಸ್ಮರಿಸಿದರು.
ನೂತನ ಕಟ್ಟಡದ ಎರಡು ಅಂತಸ್ತುಗಳಲ್ಲಿ ವಿದ್ಯಾರ್ಥಿ ನಿಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೂರನೇ ಅಂತಸ್ತನ್ನು ಭವಿಷ್ಯದಲ್ಲಿ ಸಮಾಜದ ಯುವಕರಿಗೆ ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳ ತರಬೇತಿ ನೀಡಲು ಬಳಸುವ ಉದ್ದೇಶವಿದೆ. ಅಗತ್ಯ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡುವ ಯೋಜನೆಯೂ ಇದೆ ಎಂದು ತಿಳಿಸಿದರು.
ಈ ಸಂಸ್ಥೆಯಲ್ಲಿ ಎಚ್.ಪಿ. ಲಂಕೇಶ್, ಪ್ರೊಫೆಸರ್ ನಂಜುಂಡಸ್ವಾಮಿ, ಎಚ್.ಎಸ್. ದ್ವಾರಕೇಶ್ ಸೇರಿದಂತೆ ಅನೇಕ ಮಹನೀಯರು ವಿದ್ಯಾಭ್ಯಾಸ ಮಾಡಿ ಬೆಳೆದಿದ್ದಾರೆ. ನೂತನ ಕಟ್ಟಡದಿಂದ ಮುಂದಿನ ದಿನಗಳಲ್ಲಿ ನಾಡಿಗೆ ನೂರಾರು ನಾಯಕರು ಹಾಗೂ ಸಾಧಕರು ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು
ಸಮಾಜದ ಅಭಿವೃದ್ಧಿಗೆ ಯಡಿಯೂರಪ್ಪ ಅವರಂತಹ ರಾಜಕಾರಣಿಗಳ ಕೊಡುಗೆ ಅಗತ್ಯ: ಆಯನೂರು ಮಂಜುನಾಥ್
ಶಿವಮೊಗ್ಗ: ನಮ್ಮ ಸಮಾಜದ ಅಭಿವೃದ್ಧಿಗೆ ಅನುದಾನ ನೀಡುವಂತಹ ಬಿ.ಎಸ್. ಯಡಿಯೂರಪ್ಪ ಅವರಂತಹ ನಮ್ಮದೇ ಸಮಾಜದ ರಾಜಕಾರಣಿಗಳು ಮುಂದೆ ಬರುವುದು ಅಗತ್ಯವಾಗಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಹಿತದೃಷ್ಟಿಯಿಂದ ಟ್ರಸ್ಟ್‌ಗೆ ನಮ್ಮದೇ ಸಮಾಜದವರು ತಲಾ ₹5 ಲಕ್ಷದಂತೆ ದೇಣಿಗೆ ನೀಡುತ್ತಿದ್ದು, ಈಗಾಗಲೇ 85 ಮಂದಿ ದೇಣಿಗೆ ನೀಡಿದ್ದಾರೆ. ಈ ಸಂಖ್ಯೆ 91ಕ್ಕೆ ತಲುಪಿದೆ ಎಂದು ತಿಳಿಸಿದರು.
ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ಮಕ್ಕಳನ್ನು ನಮ್ಮ ಸಮಾಜದವರು ತಮ್ಮ ಮನೆಗಳಲ್ಲಿಯೇ ಇರಿಸಿಕೊಂಡು ವಸತಿ ಹಾಗೂ ಶಿಕ್ಷಣದ ವ್ಯವಸ್ಥೆ ಮಾಡುತ್ತಿದ್ದರು. ಹೀಗಾಗಿ ನಗರದ ಹಲವು ಮನೆಗಳೇ ವಿದ್ಯಾರ್ಥಿಗಳ ಪಾಲಿಗೆ ಹಾಸ್ಟೆಲ್‌ಗಳಾಗಿದ್ದವು. ಇದೇ ಪರಂಪರೆಯ ಮುಂದುವರಿಕೆಯಾಗಿ ಇಂದು ನಮ್ಮ ಸಮಾಜದ ವತಿಯಿಂದ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ಫಲವಾಗಿ ನಮ್ಮ ಸಮಾಜ ಅತ್ಯಂತ ವಿದ್ಯಾವಂತ ಸಮಾಜವಾಗಿ ಬೆಳೆದು ನಿಂತಿದೆ ಎಂದರು.
ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿರುವ ಜಾಗಕ್ಕೆ ಸುಮಾರು ₹150 ಕೋಟಿ ಮೌಲ್ಯ ಇರಬಹುದಾಗಿದೆ. ಈ ಆಸ್ತಿಯ ಮೌಲ್ಯವನ್ನು ಸಮಾಜದ ಹಿತಕ್ಕಾಗಿ ಸದುಪಯೋಗಪಡಿಸಿಕೊಂಡು, ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ವಸತಿ, ಶಿಕ್ಷಣ ಹಾಗೂ ಮೂಲಸೌಕರ್ಯ ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಸಮಾಜದ ದಾನಿಗಳು, ಮುಖಂಡರು ಹಾಗೂ ರಾಜಕಾರಣಿಗಳ ಸಹಕಾರದಿಂದ ವಿದ್ಯಾರ್ಥಿ ನಿಲಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಭವಿಷ್ಯದ ಪೀಳಿಗೆಗೆ ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಸಮಾಜದ ಮೇಲಿನ ಪ್ರೀತಿಗೆ ಕಾರ್ಯಕ್ರಮವೇ ಸಾಕ್ಷಿ: ಡಾ. ಧನಂಜಯ್ ಸರ್ಜಿ
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಅವರ ಮೇಲೆ ಸಮಾಜಕ್ಕಿರುವ ಪ್ರೀತಿಗೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ.
ಅವರ ಹುಟ್ಟುಹಬ್ಬದ ದಿನವೇ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದ್ದು, ಅವರಿಗೂ ಸಮಾಜದ ಮೇಲೆ ಅಷ್ಟೇ ಪ್ರೀತಿ ಮತ್ತು ಬದ್ಧತೆ ಇದೆ ಎಂಬುದಕ್ಕೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದೇ ಸಾಕ್ಷಿ ಎಂದರು. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಟ್ರಸ್ಟ್‌ಗೆ ₹1 ಕೋಟಿ ನೀಡುವ ಭರವಸೆ ನೀಡಿದ್ದಾರೆ. ಆ ಭರವಸೆ ಕಾರ್ಯರೂಪಕ್ಕೆ ಬರಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಶ್ವಸ್ಥ ಟ್ರಸ್ಟ್ ಅಧ್ಯಕ್ಷ ಆಯನೂರು ಮಂಜುನಾಥ್, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಎಸ್.ಎನ್. ಚನ್ನಬಸಪ್ಪ, ಸಮಾಜದ ಮುಖಂಡರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಓಂಕಾರಪ್ಪ, ವಿರೂಪಾಕ್ಷಪ್ಪ, ಪಿ. ರುದ್ರೇಶ್, ಇ. ವಿಶ್ವಾಸ್, ಹಿರಿಯ ವಕೀಲ ಕೆ. ಬಸಪ್ಪಗೌಡ, ಎಂ. ಹಾಲಪ್ಪ, ನಂಜುಂಡ ಶೆಟ್ಟರು, ಚಂದ್ರಶೇಖರ್ ಡಿ.ಎಸ್., ಪ್ರಕಾಶ್ ಕೆ.ಆರ್., ಕೆ.ಬಿ. ರಾಮಲಿಂಗಪ್ಪ, ಎಸ್.ಎಂ. ಓಂಕಾರಮೂರ್ತಿ, ರೇಣುಕಾ ರುದ್ರಾದ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.








