ಆ.16ರಂದು ಬಿ.ವೈ. ರಾಘವೇಂದ್ರ ಜನ್ಮದಿನಾಚರಣೆ: ಗ್ರಾಮಾಂತರ ಕ್ಷೇತ್ರದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮ.
ಶಿವಮೊಗ್ಗ: ಶಿವಮೊಗ್ಗದ ಜನಪ್ರಿಯ ಸಂಸದರು ಹಾಗೂ ಅಭಿವೃದ್ಧಿಯ ಹರಿಕಾರರೆಂದೇ ಗುರುತಿಸಿಕೊಂಡಿರುವ ಬಿ.ವೈ. ರಾಘವೇಂದ್ರ ಅವರ ಜನ್ಮದಿನವನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ವತಿಯಿಂದ ಆ.16ರಂದು ವಿವಿಧ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಗ್ರಾಮಾಂತರ ಶಾಸಕ ಅಶೋಕನಾಯ್ಕ ರವರು ತಿಳಿಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.16ರಂದು ಸಂಜೆ 3 ಗಂಟೆಗೆ ಜಿಲ್ಲಾ ಬಂಜಾರ ಭವನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಜನ್ಮದಿನದ ಅಂಗವಾಗಿ ಗ್ರಾಮಾಂತರ ಕ್ಷೇತ್ರದ ಏಳು ಶಕ್ತಿ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳ ದೇವಸ್ಥಾನಗಳಲ್ಲಿ ಬಿ.ವೈ. ರಾಘವೇಂದ್ರ ಹಾಗೂ ಅವರ ಪತ್ನಿಯವರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ, ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮಾಂತರ ಕ್ಷೇತ್ರದ ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ಕೃತಕ ಕಾಲುಗಳನ್ನು ವಿತರಿಸಲಾಗುವುದು. ಇದರಿಂದ ಅಗತ್ಯವಿರುವ ಫಲಾನುಭವಿಗಳಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ವಾವಲಂಬನೆಗೆ ಉತ್ತೇಜನ ನೀಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು. ಎಂಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 18 ಸಂಘಗಳಿಗೆ ಅಗರಬತ್ತಿ ತಯಾರಿಕಾ ಯಂತ್ರಗಳನ್ನು ವಿತರಿಸಲಾಗುತ್ತಿದ್ದು, ಪ್ರತಿ ಯಂತ್ರದ ಅಂದಾಜು ಮೌಲ್ಯ ಸುಮಾರು ₹70 ಸಾವಿರವಾಗಿದೆ. ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಈ ಯೋಜನೆ ನೆರವಾಗಲಿದೆ ಎಂದು ಮಾಜಿ ಶಾಸಕರು ಹೇಳಿದರು.
ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಾರ್ಯಕರ್ತರನ್ನು ಸಂಸದ ಬಿ.ವೈ. ರಾಘವೇಂದ್ರ ಅವರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಕರ್ತರು ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಯೇ ಎಂದು ಪ್ರಶ್ನಿಸಿದಾಗ, ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ನೋಡುತ್ತಿದ್ದು, ಎಲ್ಲರೂ ಭಾಗವಹಿಸಬಹುದು ಎಂದು ತಿಳಿಸಿದರು.
ಅದೇ ವೇಳೆ, ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಲು ಕೆಲವರು ಉತ್ಸುಕರಾಗಿದ್ದಾರೆ ಎಂಬ ಚರ್ಚೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಕ್ಷೇತ್ರದ ಜನರಲ್ಲಿ ಚರ್ಚೆ ನಡೆಯುತ್ತಿರುವುದು ನಿಜ. ಆದರೆ ಸದ್ಯ ನಾನು ಬಿಜೆಪಿಯಲ್ಲಿದ್ದೇನೆ. ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ. ಅಂತಿಮವಾಗಿ ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗುಟ್ಕಾ ನಿಷೇಧ ಕ್ರಮದ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಯ ದರದಲ್ಲಿ ವ್ಯತ್ಯಾಸವಾಗಬಹುದು ಎಂಬ ಆತಂಕ ರೈತರಲ್ಲಿದೆ. ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ 24 ಗಂಟೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ತಾಲ್ಲೂಕು ಅಧ್ಯಕ್ಷ ಸಿಂಗನಹಳ್ಳಿ ಸುರೇಶ್, ಮಲ್ಲೇಶ್, ಮಾಮಕೋಸ್ ನಿರ್ದೇಶಕ ವೀರುಪಕ್ಷಾಪ್ಪ, ಎಸ್.ಸಿ. ಮೋರ್ಚಾ ಅಧ್ಯಕ್ಷ ರವಿಕುಮಾರ್, ಬಿಜೆಪಿ ಮುಖಂಡರಾದ ಶ್ರೀನಿವಾಸ್, ಅಜಯ್ ಕಾಟಿಕೆರೆ, ಷಣ್ಮುಖಪ್ಪ, ಪಿಂಳನಗೇರೆ ಗಣೇಶ್, ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜನ್ಮದಿನಾಚರಣೆಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ರಕ್ತದಾನ, ವಿಕಲಚೇತನರಿಗೆ ನೆರವು ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಆಚರಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
