ಶಿವಮೊಗ್ಗದ ನಾಡಹಬ್ಬ ದಸರಾ ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ನಡೆಯಲಿದೆ. 11 ದಿನಗಳ ಕಾಲ ನಡೆಯುವ ಉತ್ಸವಕ್ಕಾಗಿ ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದ ಶಾಸಕರುಶಾಸಕರು
14 ದಸರಾ ಸಮಿತಿಗಳ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ತಿಳಿಸಿದ್ದಾರೆ.
ದಸರಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು, ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹಬ್ಬದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದರು.
ಹಂತ ಹಂತವಾಗಿ ವೈಭವ ಹೆಚ್ಚಿದ ಅಲಂಕಾರ
ಚಾಮುಂಡೇಶ್ವರಿ ವಿಗ್ರಹದ ಅಲಂಕಾರ ನಾಗರಿಕರ ಶ್ರದ್ಧೆಗೆ ಸಂಬಂಧಿಸಿದ ವಿಚಾರ. ಅದಕ್ಕಾಗಿಯೇ ಪಾಲಿಕೆ ವತಿಯಿಂದ ವರ್ಷದಿಂದ ವರ್ಷಕ್ಕೆ ಅಲಂಕಾರಕ್ಕೆ ಹೆಚ್ಚಿನ ವೈಭವ ನೀಡಲಾಗುತ್ತಿದೆ ಎಂದು ಶಾಸಕರು ಹೇಳಿದರು. ಬಳೆ, ಒಲೆ, ಹಾರ, ಬಟ್ಟೆ, ಮೂಗುತಿ ಸೇರಿದಂತೆ ಹಲವು ಆಭರಣಗಳನ್ನು ಹಂತಹಂತವಾಗಿ ಸಿದ್ಧಪಡಿಸಲಾಗಿದೆ. ಈಗಾಗಲೇ ಆರು ಬಳೆಗಳನ್ನು ಮಾಡಿಸಲಾಗಿದ್ದು, ಮುಂದೆ ಇನ್ನಷ್ಟು ಅಲಂಕಾರಗಳನ್ನು ಸೇರಿಸುವ ಚಿಂತನೆ ಇದೆ. ಪ್ರತಿಬಾರಿ ಬೆಳ್ಳಿ ವಿಗ್ರಹವನ್ನು ಅಂಬಾರಿಯಲ್ಲಿ ಕೂರಿಸಲಾಗುತ್ತಿತ್ತು. ಈ ಬಾರಿ ಚಿನ್ನದ ಮುಖವಾಡ ಮಾಡಲು ಹಾಕಿದ್ದೆವೆ ಎಂದರು ಅದರ ಬಜೆಟ್ ಒಂದು ಕೋಟಿ ಗೂ ಅದಿಕ ಎಂದು ನಂತರ ಪತ್ರಕರ್ತರಿಗೆ ತಿಳಿಸಿದರು.
ಈ ಸರಿ ದಸರಾ ₹2.10 ಕೋಟಿ ಬಜೆಟ್.!
ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರ ಪ್ರಕಾರ, ದಸರಾ ಕಾರ್ಯಕ್ರಮಗಳಿಗೆ ಒಟ್ಟು ₹2.10 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದಿಂದ ₹50 ಲಕ್ಷ ಬಿಡುಗಡೆಯಾಗಿದ್ದು, ಉಳಿದ ₹1.60 ಕೋಟಿ ಪಾಲಿಕೆಯ ಅನುದಾನ. ಮಂಡಳಿಯಿಂದಲೂ ಸುಮಾರು ₹25 ಲಕ್ಷ ನೆರವು ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹೆಚ್ಚುವರಿ ಅನುದಾನಕ್ಕೆ ಪ್ರಯತ್ನ ನಡೆದಿದ್ದು, ಅದು ಸಿಕ್ಕರೆ ಪಾಲಿಕೆಯ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಉದ್ಘಾಟನೆಯಿಂದ ಯುವ ದಸರಾವರೆಗೆ
ಅಕ್ಟೋಬರ್ 11ರಂದು ಬೆಳಗ್ಗೆ 10.30ಕ್ಕೆ ಹಿರಿಯ ನಟ ಶ್ರೀನಾಥ್ ದಸರಾ ಉದ್ಘಾಟಿಸಲಿದ್ದಾರೆ. ಮಹಿಳಾ, ಮಕ್ಕಳ, ಸಾಂಸ್ಕೃತಿಕ, ಯುವ ಮತ್ತು ರಂಗ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳ ದಸರಾ ಈಗಾಗಲೇ ಉದ್ಘಾಟನೆಯಾಗಿದೆ. ಅ.18ರಂದು ಹಿರಿಯ ನಟಿ ಪದ್ಮಾವಾಸಂತಿ ಅವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ದಸರಾ, ಅ.20ರಂದು ನಟ ರವಿಚಂದ್ರನ್ ಅವರ ಭಾಗವಹಿಸುವಿಕೆಯೊಂದಿಗೆ ಯುವ ದಸರಾ ನಡೆಯಲಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರವಿಚಂದ್ರನ್ ಕಾರ್ಯಕ್ರಮದ ದಿನಾಂಕ ಹೊಂದಾಣಿಕೆ ಸೇರಿದಂತೆ ಅಗತ್ಯ ಸಹಕಾರ ನೀಡಿದ್ದಾರೆ.
ಮೂರು ಆನೆಗಳ ಗಜಗಾಂಭೀರ್ಯ
ಸಕ್ರೆಬೈಲು ಆನೆ ಶಿಬಿರದಿಂದ ಬಹದ್ದೂರ್, ಸೋಮಣ್ಣ ಮತ್ತು ಸಾಗರ್ ಎಂಬ ಮೂರು ಆನೆಗಳು ಉತ್ಸವದಲ್ಲಿ ಭಾಗವಹಿಸಲಿವೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಇದಕ್ಕೆ ವಿಶೇಷ ಅನುಮತಿ ನೀಡಿದ್ದಾರೆ. ಅ.11ರಂದು ಪಾಲಿಕೆ ಆವರಣದಿಂದ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ದೇವಿಯ ಮೆರವಣಿಗೆ ನಡೆಯಲಿದೆ. ನಂತರ 11 ದಿನ ಪುರಾಣೋತ್ಸವ ಮತ್ತು ವಿಶೇಷ ಪೂಜೆಗಳು ನಡೆಯಲಿವೆ. ಬೆಳ್ಳಿ ಮಂಟಪ ಮತ್ತು ಬೆಳ್ಳಿಯ ವಿಗ್ರಹವೂ ಉತ್ಸವಕ್ಕೆ ಮೆರುಗು ನೀಡಲಿವೆ.
200ಕ್ಕೂ ಹೆಚ್ಚು ದೇವತೆಗಳ ಉತ್ಸವ
ಅ.21ರಂದು ಶಿವಪ್ಪನಾಯಕ ಅರಮನೆ ಆವರಣದಿಂದ ನಗರದ 200ಕ್ಕೂ ಹೆಚ್ಚು ದೇವತೆಗಳ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಲಕ್ಷಾಂತರ ಜನರು ಬರುವ ನಿರೀಕ್ಷೆ ಇರುವುದರಿಂದ ಭದ್ರತೆ, ಸಂಚಾರ ಮತ್ತು ಮೂಲಸೌಕರ್ಯದ ಬಗ್ಗೆ ಪೊಲೀಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಅರಮನೆ ಆವರಣದಲ್ಲಿ 25 ದಿನಗಳ ರಂಗ ದಸರಾ ಕೂಡ ನಡೆಯಲಿದೆ.
ಲೇಸರ್ ಶೋ ಮತ್ತು ನಾಣ್ಯ ಪ್ರದರ್ಶನ
ಪಾಲಿಕೆ ಕಟ್ಟಡದಲ್ಲಿ 11 ದಿನ ಪ್ರತಿ ಸಂಜೆ ಲೇಸರ್ ಲೈಟಿಂಗ್ ಶೋ ನಡೆಯಲಿದೆ. ವಿಜಯದಶಮಿ ದಿನ ಬನ್ನಿ ಮುಡಿಯುವ ಕಾರ್ಯಕ್ರಮ ಮತ್ತು ಪಟಾಕಿ ಪ್ರದರ್ಶನದ ಬಳಿಕ ಅಲ್ಲಮ್ಮಪ್ರಭು ಮೈದಾನ ಹಾಗೂ ಫ್ರೀಡಂ ಪಾರ್ಕ್ನಲ್ಲಿ 3D ಲೇಸರ್ ಶೋ ಇರಲಿದೆ. ನಾಣ್ಯ ಸಂಗ್ರಹಕರ ಸಂಘದ ಸಹಯೋಗದಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಐತಿಹಾಸಿಕ ನಾಣ್ಯಗಳ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಸ್ವಚ್ಛತೆಗೆ ಆದ್ಯತೆ, ನಾಗರಿಕರಿಗೆ ಮನವಿ
ದಸರಾ ವೇಳೆ ನಗರದ ಸ್ವಚ್ಛತೆಗೆ ಧಕ್ಕೆಯಾಗದಂತೆ ಪೌರಸೇವಾ ನೌಕರರು 10–15 ಜನರ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ಅಭಿನಂದನೆ ಸಲ್ಲಿಸಲಾಯಿತು.
“ಶಿವಮೊಗ್ಗ ದಸರಾ ಕೇವಲ ಕಾರ್ಯಕ್ರಮವಲ್ಲ, ಇದು ನಗರದ ನಾಡಹಬ್ಬ. ನಗರದ ನಾಗರಿಕರು ಮತ್ತು ಜಿಲ್ಲೆಯ ಜನರು ಸಡಗರ-ಸಂಭ್ರಮದಿಂದ ಪಾಲ್ಗೊಂಡು ದಸರಾವನ್ನು ಯಶಸ್ವಿಗೊಳಿಸಬೇಕು” ಎಂದು ಶಾಸಕ ಚನ್ನಬಸಪ್ಪ ಮನವಿ ಮಾಡಿದರು.







