ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಪಕ್ಷಾಂತರ ರಾಜಕಾರಣ ಎನ್ನುವುದು ಫ್ಯಾನ್ಸಿಯಾಗಿದೆ: ಕೆ.ಎಸ್.ಈಶ್ವರಪ್ಪ

On: April 22, 2023 5:27 PM
Follow Us:
---Advertisement---

ಶಿವಮೊಗ್ಗ: ಪಕ್ಷಾಂತರ ರಾಜಕಾರಣವನ್ನು ಉಗ್ರವಾಗಿ ಖಂಡಿಸುತ್ತೇನೆ. ಅವಕಾಶವಾದ ರಾಜಕಾರಣವನ್ನು ದೇವರು ಮೆಚ್ಚುವುದಿಲ್ಲ. ಪಕ್ಷಾಂತರ ರಾಜಕಾರಣ ಎನ್ನುವುದು ಫ್ಯಾನ್ಸಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಪ್ರೆಸ್ ಟ್ರಸ್ಟ್ ನಲ್ಲಿ ಇಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜಕಾರಣದಲ್ಲಿ ಅಧಿಕಾರದ ದಾಹ ಹೆಚ್ಚಾಗುತ್ತಿದೆ. ಪಕ್ಷಾಂತರ ಮಾಡುವವರು ಸಂಘಟನೆ ಕಟ್ಟಲು ಬರುವುದಿಲ್ಲ. ಸ್ವಾರ್ಥಕ್ಕಾಗಿ ಬರುತ್ತಾರೆ. ಇದು ಎಲ್ಲಾ ಪಕ್ಷಗಳಲ್ಲೂ ಇದೆ. ನಾವೇನು ಹರಿಶ್ಚಂದ್ರರಲ್ಲ. ಆದರೆ, ಬಿಜೆಪಿಯಲ್ಲಿ ಪಕ್ಷಾಂತರ ಪಿಡುಗು ತುಂಬಾ ಕಡಿಮೆ ಎಂದು ಹೇಳಿದರು.
ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಕುಟುಂಬದ ಒಬ್ಬರಿಗೆ ಅವಕಾಶ ನೀಡಬೇಕು ಎಂಬುದು ಬಿಜೆಪಿ ಪಕ್ಷದ ನಿಲುವಾಗಿದೆ. ಆದರೆ, ಬಿಜೆಪಿಯಲ್ಲೂ ಕೂಡ ಇದಕ್ಕೆ ಅಪವಾದ ಇದೆ. ಆದರೆ, ಪಕ್ಷದ ಹಿರಿಯರು ಎಲ್ಲಾ ಒಳಿತನ್ನು ನೋಡಿಕೊಂಡೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದೆನೇ ಇರಲಿ. ಪಕ್ಷದ ಆದೇಶಕ್ಕೆ ಕಾರ್ಯಕರ್ತರಾದ ನಾವು ನಮ್ಮ ಆಸೆಗಳನ್ನು ಬಿಟ್ಟು ಕೆಲಸ ಮಾಡಬೇಕಾಗುತ್ತದೆ. ಆ ಕೆಲಸವನ್ನು ನಾನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೇನೆ. ಪಕ್ಷ ಏನೇ ಸೂಚನೆ ನೀಡಿದರೂ ಅದನ್ನು ಪಾಲಿಸುತ್ತೇನೆ ಎಂದರು.
ನನ್ನ ಬದುಕು ಸಾರ್ಥಕಗೊಂಡಿದೆ. ಏಕೆಂದರೆ ಪ್ರಧಾನಮಂತ್ರಿ ಮೋದಿ ಅವರೇ ನನಗೆ ಖುದ್ದು ಫೋನ್ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ. ಕಾಂಗ್ರೆಸ್ ಈ ಫೋನ್ ಕೂಡ ಫೇಕ್ ಎಂದು ಹೇಳುತ್ತಿರುವುದು ಅವರ ವ್ಯಕ್ತಿತ್ವವನ್ನು ತೋರುತ್ತದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ನಂಬಿಕೆ ಎನ್ನುವುದೇ ಇಲ್ಲ ಎಂದರು.

ಸೇಡಿನ ರಾಜಕಾರಣ ಮತ್ತು ಜಾತಿಯ ರಾಜಕಾರಣ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು ಇದನ್ನು ನಾನು ಒಪ್ಪುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಿದ್ಧಾಂತಗಳು ಮತ್ತು ಪಕ್ಷದ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧಗಳಿರುತ್ತವೆ. ಆದರೆ, ಅದಾದ ಮೇಲೆ ನಾವೆಲ್ಲರೂ ಸ್ನೇಹಿತರಂತೆ, ಅಣ್ಣ –ತಮ್ಮಂದಿರಂತೆ ಇರುತ್ತೇವೆ. ಈಗಲೂ ಹಾಗೆಯೇ ಇದ್ದೇವೆ. ಹಾಗೆಯೇ ಜಾತಿ ಲೆಕ್ಕಾಚಾರಗಳು ಕೂಡ ತಲೆಕಳೆಗಾಗುತ್ತವೆ. ಬಿಜೆಪಿ ಎಂದೂ ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ಅದು ರಾಷ್ಟ್ರೀಯ ಹಾಗೂ ಹಿಂದುತ್ವವಾದಿಯಾಗಿದೆ. ರಾಷ್ಟ್ರವನ್ನು ಪ್ರೀತಿಸುವ ಎಲ್ಲರನ್ನೂ ಬಿಜೆಪಿ ಪ್ರೀತಿಸುತ್ತದೆ. ರಾಷ್ಟ್ರ ಭಕ್ತ ಮುಸ್ಲಿಮರನ್ನೂ ಕೂಡ ನಾವು ಒಪ್ಪುತ್ತೇವೆ. ರಾಷ್ಟ್ರ ವಿರೋಧಿ ಮುಸ್ಲಿಮರ ಬಗ್ಗೆ ನಮ್ಮ ಸಿಟ್ಟು ಅಷ್ಟೇ ಎಂದರು.
ಶಿವಮೊಗ್ಗದಲ್ಲಿ ನನ್ನನ್ನು ಪ್ರೀತಿಸುವ ಮುಸ್ಲಿಂ ಸಮುದಾಯವಿದೆ. ನಾನು ರಾಜಕೀಯ ನಿವೃತ್ತಿ ಹೊಂದಿದಾಗ ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಮನೆಗೆ ಬಂದು ಅಣ್ಣನ ಪ್ರೀತಿ ತೋರಿಸಿ ಕಣ್ಣೀರು ಹಾಕಿದ್ದಾರೆ. ಇವರನ್ನೆಲ್ಲ ನಾನು ಹೇಗೆ ಕೆಟ್ಟ ಮುಸ್ಲಿಮರೆಂದು ಹೇಳಬೇಕಾಗುತ್ತದೆ ಎಂದ ಅವರು, ಬಿ.ಎಸ್. ಯಡಿಯೂರಪ್ಪನವರು ಕೂಡ ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ನಾನು ಕೂಡ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಿದ್ದು ರಾಜಕೀಯ ಕಾರಣಕ್ಕಾಗಿ ಅಲ್ಲ, ಹಿಂದುಳಿದವರ ಅಭಿವೃದ್ಧಿಗಾಗಿ ಅಷ್ಟೇ. ಎಲ್ಲಾ ಪಕ್ಷದವರೂ ಬ್ರಿಗೇಡ್ ನಲ್ಲಿ ಇದ್ದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ ಇದ್ದರು.

Sathish munchemane

Join WhatsApp

Join Now

 

Read More