ಎಸ್‌ಎಸ್‌ಎಲ್‌ಸಿ ವಿಶೇಷ ತರಬೇತಿ ಬಳಿಕ ನಡೆದ ಜಗಳದಲ್ಲಿ 15 ವರ್ಷದ ವಿದ್ಯಾರ್ಥಿಗೆ ದಾರುಣ ಅಂತ್ಯ
ಊರಗಡೂರು (9ನೇ ತಿರುವು) – ಎಸ್‌ಎಸ್‌ಎಲ್‌ಸಿ ವಿಶೇಷ ತರಬೇತಿ ತರಗತಿ ಮುಗಿಸಿ ಹೊರಬಂದ ತಕ್ಷಣ ನಡೆದ ಗಲಾಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಸಹಪಾಠಿಗಳು ಹತ್ಯೆ ಮಾಡಿದ ಭೀಕರ ಘಟನೆ ಊರಗಡೂರಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ಸಂಕೇತ್ (15) ಎಂದು ಗುರುತಿಸಲಾಗಿದ್ದು, ಊರಗಡೂರು ನಿವಾಸಿ ಕುಮಾರ್ ಅವರ ಪುತ್ರನಾಗಿದ್ದಾನೆ. ಕುಮಾರ್ ಅವರು ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ.
ಊರಗಡೂರಿನ 9ನೇ ತಿರುವಿನ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಕಳೆದ ಎರಡು ತಿಂಗಳಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿ ನಡೆಯುತ್ತಿದ್ದು, ಇಂದು ಸಂಜೆ ಸುಮಾರು 8 ಗಂಟೆಗೆ ತರಗತಿ ಮುಗಿದ ನಂತರ ಹರೀಶ್ ಹಾಗೂ ಇತರೆ ಸಹಪಾಠಿಗಳೊಂದಿಗೆ ಸಂಕೇತ್‌ಗೆ ಗಲಾಟೆ ನಡೆದಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಕೊನೆಗೆ ಸಂಕೇತ್‌ನ ಹತ್ಯೆಗೆ ಕಾರಣವಾಗಿದೆ.
ಸ್ಥಳೀಯ ಮಾಹಿತಿಯ ಪ್ರಕಾರ, ಕ್ರಿಕೆಟ್ ಆಟದ ವಿಚಾರವೇ ಗಲಾಟೆಗೆ ಕಾರಣ ಎನ್ನಲಾಗಿದೆ. ಹತ್ಯೆ ನಡೆಸಿದ ಆರೋಪಿಗಳಾದ ಮೂವರು ಬಾಲಕರು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಮೃತ ಬಾಲಕನ ಸಂಬಂಧಿಕರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಎಸ್‌ಪಿ ನಿಖಿಲ್ ಬಿ, ಡಿವೈಎಸ್ಪಿ ಸಂಜೀವ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಕೆಟಿ, ರಾಘವೇಂದ್ರ ಖಂಡಿಕೆ, ದೀಪಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ರಾಜಕೀಯ ಬಣ್ಣ ಪಡೆಯುವ ಸಾಧ್ಯತೆ ಇದ್ದು, ಅನ್ಯಕೋಮಿನ ಬಾಲಕರಿಂದ ಹತ್ಯೆ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.






