ರಾಜ್ಯಾಧ್ಯಕ್ಷರಾಗಿ ಷಡಾಕ್ಷರಪ್ಪ ಜಿ.ಆರ್., ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ಹೆಬ್ಬಾರ್ ಆಯ್ಕೆ
ಬೆಂಗಳೂರು, ಮೇ 30: ರಾಜ್ಯದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಯೂಟ್ಯೂಬ್ ಚಾನೆಲ್‌ಗಳು ಹಾಗೂ ಆನ್‌ಲೈನ್ ಮಾಧ್ಯಮಗಳ ಸಂಪಾದಕರು ಮತ್ತು ಪ್ರಕಾಶಕರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ “ಕರ್ನಾಟಕ ಅಸೋಸಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್” (KASMN) ಎಂಬ ನೂತನ ರಾಜ್ಯಮಟ್ಟದ ಸಂಘ ಅಸ್ತಿತ್ವಕ್ಕೆ ಬಂದಿದೆ.
ಬೆಂಗಳೂರು ನಗರದ ಜಯನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಶಿವಮೊಗ್ಗದ ‘ಸುದ್ದಿಸಾರ’ ದಿನಪತ್ರಿಕೆಯ ಪ್ರಕಾಶಕರಾದ ಷಡಾಕ್ಷರಪ್ಪ ಜಿ.ಆರ್. ಅವರನ್ನು ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೊನ್ನಾವರದ ‘ನಾಗರಿಕ’ ಪತ್ರಿಕೆಯ ಸಂಪಾದಕ-ಪ್ರಕಾಶಕರಾದ ಕೃಷ್ಣಮೂರ್ತಿ ಹೆಬ್ಬಾರ್ ಉಪಾಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‘ಪ್ರಜಾಕಾಲ’ ಪತ್ರಿಕೆಯ ಸಂಪಾದಕ-ಪ್ರಕಾಶಕ ಪುರುಷೋತ್ತಮ ಕೆ. ಕಾರ್ಯದರ್ಶಿಯಾಗಿ, ‘ಐನಿ ಟಿವಿ’ ಯೂಟ್ಯೂಬ್ ವಾಹಿನಿಯ ಸಂಪಾದಕಿ ಭಾರತಿ ರವಿ ಕುಮಾರ್ ಜಂಟಿ ಕಾರ್ಯದರ್ಶಿಯಾಗಿ ಹಾಗೂ ‘ಸ್ಪೆಷಲ್ ನ್ಯೂಸ್’ ಪತ್ರಿಕೆಯ ಸಂಪಾದಕ-ಪ್ರಕಾಶಕ ಬಾವ ಪದರಂಗಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯಕಾರಿ ಸಮಿತಿಗೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿತ್ವವನ್ನು ಒದಗಿಸುವ ನಿಟ್ಟಿನಲ್ಲಿ ಹತ್ತು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ರಾಜ್ಯದ ವಿವಿಧ ಭಾಗಗಳ ಸಣ್ಣ ಮತ್ತು ಮಧ್ಯಮ ಮಾಧ್ಯಮ ಸಂಸ್ಥೆಗಳಿಗೆ ಸಂಘಟಿತ ಧ್ವನಿಯನ್ನು ಒದಗಿಸುವ ಪ್ರಯತ್ನ ಕೈಗೊಳ್ಳಲಾಗಿದೆ.
ಜಯನಗರದ 16ನೇ ಎ-ಮೈನ್, 4ನೇ ಟಿ-ಬ್ಲಾಕ್‌ನಲ್ಲಿರುವ ಸಂಘದ ರಾಜ್ಯ ಕಚೇರಿಯಿಂದ ಕಾರ್ಯಚಟುವಟಿಕೆಗಳು ಆರಂಭವಾಗಲಿದ್ದು, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಡಿಜಿಟಲ್ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್‌ಗಳು ಹಾಗೂ ಆನ್‌ಲೈನ್ ಪೋರ್ಟಲ್‌ಗಳ ಸಂಪಾದಕರು ಮತ್ತು ಪ್ರಕಾಶಕರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಕಾರ್ಯ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಷಡಾಕ್ಷರಪ್ಪ ಜಿ.ಆರ್., “ಸಣ್ಣ ಮತ್ತು ಮಧ್ಯಮ ಮಾಧ್ಯಮ ಸಂಸ್ಥೆಗಳು ಇಂದು ಅಸ್ತಿತ್ವದ ಹೋರಾಟ ನಡೆಸುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಧ್ಯಮ ನೀತಿಗಳು ದೊಡ್ಡ ಮಾಧ್ಯಮ ಸಂಸ್ಥೆಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಅಗತ್ಯವಾದ ಪ್ರೋತ್ಸಾಹ ಮತ್ತು ರಕ್ಷಣೆಯನ್ನು ಒದಗಿಸುತ್ತಿಲ್ಲ. ಎರಡನೇ ಪತ್ರಿಕಾ ಆಯೋಗದ ಶಿಫಾರಸುಗಳು ಇಂದಿಗೂ ಸಂಪೂರ್ಣ ಜಾರಿಯಾಗದಿರುವುದು ಮಾಧ್ಯಮ ಕ್ಷೇತ್ರದ ದುರಂತವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮೂಲ ಉದ್ದೇಶಗಳೇ ಪರಿಣಾಮಕಾರಿಯಾಗಿ ಈಡೇರದೆ ಇರುವ ಪರಿಣಾಮ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಸ್ವಾಯತ್ತತೆ, ವೃತ್ತಿಪರತೆ ಮತ್ತು ಆರ್ಥಿಕ ಸದೃಢತೆಯನ್ನು ಕಾಪಾಡುವ ನಿಟ್ಟಿನಲ್ಲಿ KASMN ಸಂಘವು ಹೋರಾಟ, ತರಬೇತಿ, ಜಾಗೃತಿ ಮತ್ತು ಪ್ರತಿನಿಧಿತ್ವದ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ” ಎಂದು ಅವರು ತಿಳಿಸಿದರು.
ರಾಜ್ಯದ ಸಣ್ಣ ಮತ್ತು ಮಧ್ಯಮ ಮಾಧ್ಯಮ ಸಂಸ್ಥೆಗಳ ಹಕ್ಕುಗಳು, ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಸಂಘವು ಸಮನ್ವಯ ವೇದಿಕೆಯಾಗಲಿದ್ದು, ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಗಳ ಮುಂದೆ ಮಾಧ್ಯಮಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಉದ್ದೇಶ ಹೊಂದಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.







