ಯಲಬುರ್ಗಾ, : ಸಮಾಜ ಸೇವೆಯನ್ನು ಯಾವುದೇ ರಾಜಕೀಯ ಲಾಭದ ಉದ್ದೇಶದಿಂದ ಮಾಡುತ್ತಿಲ್ಲ. ಆರಂಭದಿಂದಲೂ ಜನಸೇವೆ ಮತ್ತು ನೊಂದವರ ಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಕುಕನೂರು ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭಗೊಳ್ಳಲಿರುವ ‘ಶರಣು ಕಾರ್ಯಾಲಯ’ ಉದ್ಘಾಟನೆ ಕುರಿತು ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿದೆ. ಈ ಹಂತದಲ್ಲಿ ರಾಜಕೀಯ ಚರ್ಚೆ ನಡೆಸುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಹಿರಿಯರು, ಹಿತೈಷಿಗಳು ಹಾಗೂ ಅಭಿಮಾನಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು. ಸದ್ಯ ನಮ್ಮ ಉದ್ದೇಶ ಬಡವರು, ದಲಿತರು, ನೊಂದವರು ಹಾಗೂ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನೆರವಾಗುವುದಾಗಿದೆ” ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, “ತಾಲ್ಲೂಕಿನ ವಿವಿಧ ಭಾಗಗಳಿಂದ ಪ್ರತಿನಿತ್ಯ ನೂರಾರು ಅಭಿಮಾನಿಗಳು ಮತ್ತು ಸಾರ್ವಜನಿಕರು ಕಳಕಪ್ಪ ಕಂಬಳಿಯವರನ್ನು ಭೇಟಿ ಮಾಡಲು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸುಲಭವಾಗಿ ಸಂಪರ್ಕ ಸಾಧಿಸಲು ಶರಣು ಕಾರ್ಯಾಲಯ ಆರಂಭಿಸಲಾಗುತ್ತಿದೆ. ಇದು ಸಾರ್ವಜನಿಕರ ಸೇವೆಗಾಗಿ ರೂಪುಗೊಂಡಿರುವ ವೇದಿಕೆಯಾಗಿದೆ” ಎಂದರು.
“ನಮ್ಮ ಮತ್ತು ಕಳಕಪ್ಪ ಕಂಬಳಿಯವರ ಸ್ನೇಹ ಹಲವು ವರ್ಷಗಳದ್ದು. ಅವರ ಸಮಾಜಮುಖಿ ಕಾರ್ಯಗಳಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಈ ಕಾರ್ಯಕ್ರಮದಲ್ಲಿ ಜಾತಿ, ಧರ್ಮ, ಪಕ್ಷ ಅಥವಾ ರಾಜಕೀಯದ ಯಾವುದೇ ಬಣ್ಣವಿಲ್ಲ. ಇದು ಸಂಪೂರ್ಣವಾಗಿ ಪಕ್ಷಾತೀತ ಮತ್ತು ಜನಸೇವಾ ಉದ್ದೇಶದ ಕಾರ್ಯಕ್ರಮವಾಗಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಅವರಿಗೆ ಅಪಾರ ಅಭಿಮಾನಿಗಳಿದ್ದು, ಅವರ ಆಶಯದಂತೆ ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯ ಪಾತ್ರ ವಹಿಸಲಿದ್ದಾರೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಷಣ್ಮುಖಪ್ಪ ರಾಂಪೂರ, ಪಕ್ಕೀರಪ್ಪ ತಳವಾರ, ಇಮಾಮಹುಸೇನ್ ಮಂಡಲಗೇರಿ, ಅಂದಪ್ಪ ಹಾಲಕೇರಿ, ನೀಲನಗೌಡ, ಸುರೇಶ್ ಮ್ಯಾಗೇರಿ, ಮಹಾಂತೇಶ ಬಾಸ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಕಳಕೇಶ ಬೇವಿನಗಿಡದ, ಯಲಬುರ್ಗಾ






