ನ್ಯೂಡಿಟೆಕ್ಟಿವ್ ಪತ್ರಿಕೋದ್ಯಮದ ಜತೆಗೆ ಸಮಾಜಸೇವೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಶಿವಮೊಗ್ಗದ ಕೆ.ಎಂ. ಸತೀಶ್ಗೌಡ ಅವರಿಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ 2026ನೇ ಸಾಲಿನ ‘ಸಾಧನ ಸಿರಿ ಪ್ರಶಸ್ತಿ’ ಘೋಷಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದ್ದಾರೆ.
ಸುಮಾರು 16 ವರ್ಷಗಳ ಹಿಂದೆ ‘ಆಸರೆ ಟ್ರಸ್ಟ್’ ಸ್ಥಾಪಿಸಿರುವ ಸತೀಶ್ಗೌಡ ಅವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ವೈದ್ಯಕೀಯ ನೆರವು, ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ, ರಕ್ತದಾನ, ಅನ್ನದಾನ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲೇ ಸರ್ಕಾರದಿಂದ ಪರವಾನಗಿ ಪಡೆದು ಸರ್ವಿಸ್ ರಿವಾಲ್ವರ್ ಹೊಂದಿರುವ ಪತ್ರಕರ್ತ ಎಂಬ ವಿಶಿಷ್ಟ ಹೆಗ್ಗಳಿಕೆಯೂ ಸತೀಶ್ಗೌಡ ಅವರದ್ದಾಗಿದೆ. ಆದರೆ ಈ ವೈಶಿಷ್ಟ್ಯವನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಬಳಸಿಕೊಳ್ಳದೆ, ಸಮಾಜದಲ್ಲಿ ಯಾರಿಗೂ ತೊಂದರೆ ನೀಡದೆ, ‘ತಾವು ಆಯಿತು, ತಮ್ಮ ಕಾಯಕವಾಯಿತು’ ಎಂಬ ಮನೋಭಾವದೊಂದಿಗೆ ಸರಳವಾಗಿ ತಮ್ಮ ವೃತ್ತಿ ಮತ್ತು ಸೇವಾ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಪತ್ರಿಕೋದ್ಯಮವನ್ನು ಕೇವಲ ಸುದ್ದಿ ಪ್ರಕಟಿಸುವ ವೃತ್ತಿಗೆ ಸೀಮಿತಗೊಳಿಸದೆ, ಜನರ ಸಮಸ್ಯೆಗಳಿಗೆ ಧ್ವನಿಯಾಗಿಸುವ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಸಾಧನವಾಗಿ ಬಳಸಿಕೊಂಡಿರುವುದು ಅವರ ಕಾರ್ಯದ ಪ್ರಮುಖ ವಿಶೇಷತೆಯಾಗಿದೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಜತೆಗೆ ಅಗತ್ಯವಿರುವ ಸಂದರ್ಭದಲ್ಲಿ ತಮ್ಮ ಟ್ರಸ್ಟ್ ಮೂಲಕ ನೆರವಿನ ಹಸ್ತ ಚಾಚುತ್ತಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಮುಂದುವರಿಸಿರುವ ರಂಭಾಪುರಿ ಪೀಠವು ಈ ಬಾರಿ ಐವರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯರಿಗೆ ‘ಶಿವಾಚಾರ್ಯ ರತ್ನ’, ಡಾ. ಅನ್ನಪೂರ್ಣ ಹಿರೇಮಠ ಅವರಿಗೆ ‘ಸಾಹಿತ್ಯ ಸಿರಿ’, ಸಿದ್ದು ನ್ಯಾಮಗೌಡ ಕವಟಗಿ ಅವರಿಗೆ ‘ರಂಭಾಪುರಿ ಯುವ ಸಿರಿ’ ಹಾಗೂ ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರಿಗೆ ‘ವೀರಶೈವ ಧರ್ಮ ಸಿರಿ’ ಪ್ರಶಸ್ತಿ ಘೋಷಿಸಲಾಗಿದೆ.
ಸತೀಶ್ಗೌಡ ಅವರಿಗೆ ನೀಡಲಾಗುತ್ತಿರುವ ‘ಸಾಧನ ಸಿರಿ’ ಪ್ರಶಸ್ತಿ, ಪತ್ರಿಕೋದ್ಯಮದ ಕಾಯಕದ ಜತೆಗೆ ಸಮಾಜಮುಖಿ ಸೇವೆಯನ್ನು ನಿಸ್ವಾರ್ಥವಾಗಿ ಮುನ್ನಡೆಸುತ್ತಿರುವ ಅವರ ನಿರಂತರ ಪ್ರಯತ್ನಕ್ಕೆ ಸಾತ್ವಿಕ ನುಡಿ ಪತ್ರಿಕಾ ಬಳಗದಿಂದ ಅಭಿನಂದನೆಗಳು
ಬಾಳೆಹೋನ್ನರು ಶ್ರೀ ರಂಭಾಪುರಿ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಅವರು ಪತ್ರಿಕೋದ್ಯಮ ಮತ್ತು ಸಮಾಜ ಸೇವೆ ಗುರುತಿಸಿ ‘ಸಾಧನ ಸಿರಿ’ ಪ್ರಶಸ್ತಿ ನೀಡುತ್ತಿರುವ ಜಗದ್ಗುರುಗಳಿಗೆ ಭಕ್ತಿ ಪೂರ್ವಕ ಅಭಿನಂದೆನಗಳು.







