ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆಗೆ ಮೊದಲೇ ಜೆಡಿಎಸ್‍ನಿಂದ ಬಿ.ಫಾರಂ ಪಡೆದ ಆಯನೂರು

0
333

ಶಿವಮೊಗ್ಗ/ಚಿತ್ರದುರ್ಗ: ಇಂದು ಮಧ್ಯಾಹ್ನ ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸುತ್ತೇನೆ ಎಂದು ಆಯನೂರು ಮಂಜುನಾಥ್ ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ಆದರೆ, ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೇ ಜೆಡಿಎಸ್‍ನಿಂದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಲು ಬಿ.ಫಾರಂ ಪಡೆದಿದ್ದಾರೆ.
ಇಂದು ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಸಮಯ ನೀಡಿದ್ದಾರೆ. ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದರು.

ಆದರೆ, ಚಿತ್ರದುರ್ಗಕ್ಕೆ ಪ್ರಚಾರ ಸಭೆಗೆ ಆಗಮಿಸಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು.

ಅಲ್ಲಿಯೇ ಆಯನೂರು ಮಂಜುನಾಥ್ ಅವರಿಗೆ ಹೆಚ್.ಡಿ. ಕುಮಾರಸ್ವಾಮಿ ಬಿ.ಫಾರಂ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿ.ಫಾರಂ ಪಡೆದು ಹೆಚ್.ಡಿ.ಕೆ.ಯವರಿಗೆ ಆಯನೂರು ನಮಸ್ಕರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಂದು ಸಂಜೆಯೊಳಗೆ ಎಂ.ಎಲ್.ಸಿ. ಸ್ಥಾನಕ್ಕೆ ರಾಜೀನಾಮೆ ನೀಡುವ ಆಯನೂರು ಮಂಜುನಾಥ್ ನಾಳೆ ಬೆಳಿಗ್ಗೆ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.