ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧ ಸರಿಪಡಿಸಲಾಗದಷ್ಟು ಮಟ್ಟಿಗೆ ಕೆಳಕ್ಕೆ ಇಳಿದಿದೆ ಎನ್ನುವ ಅರ್ಥದ ಸೋಶಿಯಲ್ ಮೀಡಿಯಾ ಪೋಸ್ಟ್‌ಅನ್ನು ಡೊನಾಲ್ಡ್ ಟ್ರಂಪ್ ಮಾಡಿದ್ದಾರೆ. ಕರಾಳ ಚೀನಾಕ್ಕೆ ನಾವು ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡಿದ್ದೇವೆ ಎಂದು ತಮ್ಮ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್‌ಮಾಡಿದ್ದಾರೆ.
ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ಕೆಲವು ದಿನಗಳ ನಂತರ ಅವರು ತಮ್ಮ ಟ್ರುಥ್ ಸೋಶಿಯಲ್ ಖಾತೆಯಲ್ಲಿ ಬೇಸರದಿಂದಲೇ ಈ ಟ್ವೀಟ್ ಮಾಡಿರುವುದು ಕಂಡಿದೆ.
ಭಾರತ-ರಷ್ಯಾವನ್ನು ಕಳೆದುಕೊಂಡಿದ್ದೇವೆ ಎಂದು ಬರೆದ ಟ್ರಂಪ್
ಚೀನಾದ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಟಿಯಾಂಜಿನ್ ಎಸ್‌ಸಿಒ ಶೃಂಗಸಭೆಯಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಇದ್ದರು. ಈ ಮೂವರು ನಾಯಕರ ನಡುವಿನ ಸೌಹಾರ್ದತೆಯು ಅಮೆರಿಕ್ಕೆ ದೊಡ್ಡ ಸಂದೇಶವನ್ನು ರವಾನಿಸಿತ್ತು. ಇದನ್ನು ಅನೇಕ ರಾಜಕೀಯ ವಿಶ್ಲೇಷಕರು ಒಂದು ಮಹತ್ವದ ತಿರುವುದು ಎಂದು ಕರೆದಿದ್ದರೆ, ಅಮೆರಿಕ ಅಧ್ಯಕ್ಷರು ನಡೆಸಿರುವ ಸುಂಕ ಯುದ್ಧದ ನಡುವೆ ಇದು ವಿಶ್ವದ ಹೊಸ ಆರ್ಡರ್ ಎಂದು ರಾಜಕೀಯ ತಜ್ಞರು ಕರೆದಿದ್ದಾರೆ.
“ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್,” ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಅದರೊಂದಿಗೆ ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪ್ರತಿಕ್ರಿಯೆ ನೀಡೋದಿಲ್ಲ ಎಂದ ಭಾರತ
ಇದರ ನಡುವೆ ವಿದೇಶಾಂಗ ವ್ಯವಹಾರಗಳ ಇಲಾಖೆ, ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಟ್ರಂಪ್ ಅವರ ಪೋಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿತು. ‘ಪ್ರಸ್ತುತ ನಾವು ಟ್ರಂಪ್ ಅವರ ಪೋಸ್ಟ್‌ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡೋದಿಲ್ಲ’ ಎಂದು ಹೇಳಿದೆ.
ಭಾರೀ ತೆರಿಗೆ ವಿಧಿಸಿದ್ದ ಟ್ರಂಪ್
ಕಳೆದ ತಿಂಗಳು ನವದೆಹಲಿಯ ಮೇಲೆ ಟ್ರಂಪ್ ವಿಧಿಸಿದ ಶೇ.50 ರಷ್ಟು ಸುಂಕದ ನಂತರ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ಕಂಡಿವೆ. ರಷ್ಯಾ ತೈಲವನ್ನು ಭಾರತ ನಿರಂತರವಾಗಿ ಖರೀದಿಸುವುದರ ಮೇಲೆ ಅಮೆರಿಕ ಶೇ.25 ರಷ್ಟು ಮೂಲ ಸುಂಕ ಮತ್ತು ಶೇ.25 ರಷ್ಟು ದಂಡವನ್ನು ವಿಧಿಸಿದೆ.
ಟ್ರಂಪ್ ಚೀನಾದ ಮೇಲೆ ಶೇ. 145 ರಷ್ಟು ಸುಂಕ ವಿಧಿಸುವ ಹಂತಕ್ಕೂ ಹೋಗಿದ್ದರು. ಆದರೆ ಅವುಗಳನ್ನು 90 ದಿನಗಳವರೆಗೆ ತಡೆಹಿಡಿಯಲಾಗಿದೆ. ಟ್ರಂಪ್ ಸುಂಕ ಏರಿಕೆ ಮಾತ್ರವಲ್ಲದೆ, ಅವರ ಸರ್ಕಾರದ ಹಿರಿಯ ಸಚಿವರು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಇದರಿಂದಾಗಿ ನವದೆಹಲಿಯು, ಅಮೆರಿಕ ವಿರೋಧಿ ಬಣವಾದ ಚೀನಾ ಹಾಗೂ ರಷ್ಯಾದ ಜೊತೆ ತಮ್ಮ ಸಂಬಂಧ ಬೆಳೆಸಿದೆ ಎಂದು ತಜ್ಞರು ಹೇಳಿದ್ದಾರೆ.
ಒಂದು ರೀತಿಯ ನಿಲುವಾಗಿ ಆರಂಭವಾದದ್ದು ಈಗ ಭಾರತವು “ಬಹುಧ್ರುವೀಯತೆ ಮತ್ತು ಬಹುಪಕ್ಷೀಯತೆಯ ಹೊಸ ಯುಗ” ಎಂದು ಕರೆಯುವಂತೆ ವಿಕಸನಗೊಂಡಿರುವಂತೆ ಕಾಣುತ್ತಿದೆ. ಇದು ಶೀತಲ ಸಮರದ ನಂತರದ, ಅಮೆರಿಕ ಪ್ರಾಬಲ್ಯದ ಏಕಧ್ರುವೀಯ ಕ್ರಮಕ್ಕೆ ನೇರ ಸವಾಲಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.