ಶಿವಕುಮಾರ ಸ್ವಾಮೀಜಿ ನೌಕರರ ಸಂಘ, ಶಿವಮೊಗ್ಗ ವತಿಯಿಂದ 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ನಗರದ ಕುವೆಂಪು ಮಂದಿರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವು ಪೂಜ್ಯ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು, ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ, ಆನಂದಪುರ ಶ್ರೀ ಬೆಕ್ಕಿನಕಲ್ಮಠ ಶಿವಮೊಗ್ಗದ ಪೂಜ್ಯ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತರಳಬಾಳು ಶಾಖಾಮಠ ಸಾಣೆಹಳ್ಳಿಯ ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಶಿವಮೊಗ್ಗ ಲೋಕಸಭಾ ಸದಸ್ಯರಾದ ಸನ್ಮಾನ್ಯ ಬಿ.ವೈ. ರಾಘವೇಂದ್ರ ಅವರು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ ಅವರು, “ಈ ಹಿಂದೆ ನಾನು ಸಂದರ್ಶನ ನಡೆಸಿದ ಸಂದರ್ಭದಲ್ಲಿ ನಮ್ಮ ಸಮಾಜದ ಮಕ್ಕಳ ಶಿಕ್ಷಣದ ಸಮಸ್ಯೆ, ಬಡತನ ಹಾಗೂ ಅವರ ಸಂಕಷ್ಟಗಳ ಬಗ್ಗೆ ತಿಳಿದುಕೊಂಡಿದ್ದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ ಸ್ವಾಮೀಜಿ ನೌಕರರ ಸಂಘದಿಂದ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡುವ ಯೋಜನೆ ಕೈಗೊಳ್ಳಲಾಗಿದೆ” ಎಂದು ಹೇಳಿದರು.
“ಈ ಕಾರ್ಯಕ್ಕೆ ಸಮಾಜದ ಬಂಧುಗಳು, ನೌಕರರು ಹಾಗೂ ಪೂಜ್ಯ ಸ್ವಾಮೀಜಿಗಳ ಸಹಕಾರ ದೊರೆಯುತ್ತಿದೆ. ಹಿಂದೆ ಬೆಕ್ಕಿನಕಲ್ಮಠ ಶ್ರೀಗಳು ಹಾಸ್ಟೆಲ್ ಉದ್ಘಾಟಿಸಿದ ಸಂದರ್ಭದಲ್ಲಿ 40 ಮಕ್ಕಳಿಂದ ಆರಂಭವಾದ ಈ ಸೇವೆ ಇಂದು 250 ಮಕ್ಕಳಿಗೆ ಉಚಿತ ಊಟ ಮತ್ತು ವಸತಿ ನೀಡುವ ಮಟ್ಟಕ್ಕೆ ಬೆಳೆದಿದೆ. ಇಲ್ಲಿಯವರೆಗೆ ಸುಮಾರು 2,200 ಮಕ್ಕಳು ಉಚಿತ ಶಿಕ್ಷಣದ ಸೌಲಭ್ಯ ಪಡೆದಿದ್ದಾರೆ” ಎಂದರು.
“ಶಿಕ್ಷಣ ಎಂದರೆ ಕೇವಲ ಉದ್ಯೋಗ ಪಡೆಯುವುದಲ್ಲ; ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುವ ನಾಗರಿಕರಾಗಬೇಕು. ಇದರಲ್ಲಿ ಪೋಷಕರ ಜವಾಬ್ದಾರಿಯೂ ಬಹಳ ಮುಖ್ಯ. ಕೇವಲ ಅಂಕಗಳಿಗೆ ಮಹತ್ವ ನೀಡದೆ ಮಕ್ಕಳನ್ನು ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳೊಂದಿಗೆ ಬೆಳೆಸಬೇಕು” ಎಂದು ಸಲಹೆ ನೀಡಿದರು.
“ಇಂದಿನ ಕಾಲದಲ್ಲಿ ವಿದ್ಯೆ ಬಂದಿದೆ, ಆದರೆ ವಿನಯ ಕಡಿಮೆಯಾಗುತ್ತಿದೆ; ಬುದ್ಧಿ ಬಂದಿದೆ, ಆದರೆ ಸಂಸ್ಕಾರ ಮರೆಯಾಗುತ್ತಿದೆ. ಕುಟುಂಬ, ಹಿರಿಯರು, ಸಮಾಜ ಹಾಗೂ ಮಠ-ಮಂದಿರಗಳ ಬಗ್ಗೆ ಯುವಜನತೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ಒಳಪಂಗಡಗಳ ನಡುವಿನ ಅಂತರವನ್ನು ನಿವಾರಿಸಿ ಒಗ್ಗಟ್ಟಿನ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಯುವಶಕ್ತಿಯ ಮೇಲಿದೆ” ಎಂದು ಹೇಳಿದರು.
ಈ ಹಿಂದೆ ಬಸವ ಸಂಗಮ ಹಾಗೂ ಶಿವಕುಮಾರ ಸ್ವಾಮೀಜಿ ನೌಕರರ ಸಂಘದ ವತಿಯಿಂದ ಸಿದ್ಧಗಂಗಾ ಮಠಕ್ಕೆ ಎರಡು ಲಾರಿ ಅಕ್ಕಿ ಸಹಾಯ ನೀಡಿದ ಸೇವಾ ಕಾರ್ಯವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಸಮಾಜದ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.





