ಇದೀಗ ಬಂದ ಸುದ್ದಿ ಅಪರಾಧ ಸುದ್ದಿ ಜಿಲ್ಲಾ ಸುದ್ದಿ ರಾಜಕೀಯ ಲೋಕಲ್ ಸುದ್ದಿ ಸುದ್ದಿ ಆರೋಗ್ಯ ಆಧ್ಯಾತ್ಮಿಕ ಉದ್ಯೋಗ ಕ್ರೀಡೆ ಶಿಕ್ಷಣ

ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ: ಶಿವಮೊಗ್ಗದಲ್ಲಿ ಯುವಕರಿಗೆ ಮೋಸದ ಜಾಲ?

On: June 28, 2026 5:54 PM
Follow Us:
---Advertisement---

ಶಿವಮೊಗ್ಗ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಆರೋಪ ಶಿವಮೊಗ್ಗ ನಗರದಲ್ಲಿ ಕೇಳಿಬಂದಿದೆ. ಕಂದಾಯ ಇಲಾಖೆಯ ಸರ್ವೆ ವಿಭಾಗದಲ್ಲಿ ಎರಡು ವರ್ಷ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ ಸಚಿನ್ ಎಂಬಾತ, ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸುಮಾರು 50ಕ್ಕೂ ಹೆಚ್ಚು ಜನರಿಂದ ಎರಡು ಕೋಟಿಗೂ ಅಧಿಕ ಹಣ ಪಡೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಆರೋಪದ ಪ್ರಕಾರ, ಶಿವಮೊಗ್ಗ ನಗರದ ಹರಿಗೆಯ ನಿವಾಸಿಯಾಗಿರುವ ಸಚಿನ್, ನಿರುದ್ಯೋಗಿ ಯುವಕರ ವಿಶ್ವಾಸ ಗಳಿಸಲು ನಗರದ ದುರ್ಗಿಗುಡಿ ಪ್ರದೇಶದಲ್ಲಿ “ಅವಿಔನ್ ಟೆಕ್ ಪಾರ್ಕ್”, ಬಸವನಗುಡಿಯಲ್ಲಿ “ರಿಯಾ ಎಜುಕೇಶನ್ ಟ್ರಸ್ಟ್”, ಕುವೆಂಪು ರಸ್ತೆಯಲ್ಲಿ “ನವೋದಯ ಟ್ರಸ್ಟ್ ಅಂಡ್ ಇನ್ಸ್ಟಿಟ್ಯೂಟ್” ಹೆಸರಿನಲ್ಲಿ ಸಂಸ್ಥೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ.

ಈ ಸಂಸ್ಥೆಗಳ ಮೂಲಕ ಇಲಾಖೆಗೆ ಸಂಬಂಧಿಸಿದ ತರಬೇತಿ ನೀಡುವುದಾಗಿ ಹೇಳಿ ಯುವಕರನ್ನು ನಂಬಿಸಿ, ನಂತರ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಂತ ಹಂತವಾಗಿ ಹಣ ಪಡೆದಿದ್ದಾನೆ ಎಂಬ ಆರೋಪವಿದೆ.

ಕೆಲವು ಯುವಕರಿಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ಸರ್ಕಾರಿ ನೇಮಕಾತಿ ಪತ್ರ ಕೊಡಿಸುವುದಾಗಿ ಹೇಳಿ, 20ರಿಂದ 30 ಜನರ ಗುಂಪುಗಳಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಅಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಆಗಿದೆ ಎಂದು ಹೇಳಿ, ಮೊದಲೇ ಸಿದ್ಧಪಡಿಸಿಕೊಂಡಿದ್ದ ನಕಲಿ ನೇಮಕಾತಿ ಪತ್ರಗಳನ್ನು ನೀಡಿ ಶಿವಮೊಗ್ಗಕ್ಕೆ ವಾಪಸ್ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಕೆಪಿಎಸ್‌ಸಿ ಮೂಲಕ ಅಂತಿಮ ನೇಮಕಾತಿ ಪತ್ರ ಕೊಡಿಸಲಾಗುವುದು ಎಂದು ಮತ್ತಷ್ಟು ಕಾಲಾವಕಾಶ ಪಡೆದು ಯುವಕರನ್ನು ನಂಬಿಸಿದ್ದಾನೆ ಎನ್ನಲಾಗಿದೆ.

ಈ ವಂಚನೆ ಪ್ರಕರಣದಲ್ಲಿ ಸ್ವಪ್ನ, ಸುಜಾತಾ, ಕೇಶವ ಸೇರಿದಂತೆ ಇನ್ನೂ ಕೆಲವರ ಹೆಸರುಗಳು ಕೇಳಿಬರುತ್ತಿದ್ದು, ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದರೆ ಮಾತ್ರ ಈ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಮಾಹಿತಿ ಹೊರಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸರ್ಕಾರಿ ದಾಖಲೆಗಳ ದುರುಪಯೋಗವಾಗಿರುವ ಸಾಧ್ಯತೆಯೂ ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈ ಬಗ್ಗೆ ತನಿಖೆ ಅಗತ್ಯವಾಗಿದೆ.

ಈ ಸಂಬಂಧ ಕೆಲವರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗಾಗಿ ಸಚಿನ್‌ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಆದರೆ ಆತನ ಕಚೇರಿ ದುರ್ಗಿಗುಡಿ ವ್ಯಾಪ್ತಿಯಲ್ಲಿ ಇರುವ ಕಾರಣ ಪ್ರಕರಣವನ್ನು ದೊಡ್ಡಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಉದ್ಯೋಗದ ಆಸೆಯಿಂದ ಹಣ ಕಳೆದುಕೊಂಡಿರುವ ಯುವಕರು ಇದೀಗ ಕೆಲಸವೂ ಇಲ್ಲದೆ, ನೀಡಿದ ಹಣವೂ ಮರಳಿ ಸಿಗದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆಯಿಂದ ಪೊಲೀಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Sathish munchemane

Join WhatsApp

Join Now

 

Read More

Leave a Comment