ರಾಜ್ಯದ ಕಾಂಗ್ರೆಸ್ ಸರ್ಕಾರ ಸಚಿವ ಸ್ಥಾನಕ್ಕಾಗಿ ಕಿತ್ತಾಟದಲ್ಲಿ ತೊಡಗಿದ್ದು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆರೋಪಿಸಿದರು.
ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೂನ್ ತಿಂಗಳು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಸಮಯವಾಗಿದ್ದರೂ ಸರ್ಕಾರಕ್ಕೆ ಈದರ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ನೇಮಕಾತಿ ಮಾಡುವುದಾಗಿ ಹೇಳಿ ಕಾಲಹರಣ ಮಾಡಲಾಗಿದೆ. ಶಿಕ್ಷಣ ಸಚಿವರಾಗಿ ಶೂನ್ಯ ಸಾಧನೆ ಮಾಡಿದ್ದಾರೆ” ಎಂದು ಟೀಕಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಪಿಸಿ ಶಾಲೆ ಆರಂಭಿಸುವುದಾಗಿ ಹೇಳಿ ಭೂಮಿ ಪೂಜೆಗೆ ಸಿದ್ಧತೆ ಮಾಡಿಕೊಂಡು ನಂತರ ಯೋಜನೆಯನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದ ಅವರು, ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ಮಳೆಯಿಂದ ಸೋರುತ್ತಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದರು.
ಸರ್ಕಾರಿ ಸಿ.ಎ ಸೈಟ್ಗಳನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕಡಿಮೆ ದರದಲ್ಲಿ ನೀಡಿರುವ ವಿಚಾರವನ್ನು ಪ್ರಸ್ತಾಪಿಸಿದ ಡಿ.ಎಸ್. ಅರುಣ್, ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗಿದ್ದು, ಆದರೂ ಸರ್ಕಾರ ಅದನ್ನೇ ಮುಂದುವರಿಸುತ್ತಿದೆ ಎಂದು ಆರೋಪಿಸಿದರು.
“ಸರ್ಕಾರದ ಬಳಿ ಹಣದ ಕೊರತೆ ಇದ್ದು, ಹಲವು ನಿಗಮ ಮಂಡಳಿಗಳ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ” ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಪ್ರತಿಕ್ರಿಯಿಸಿದ ಅವರು, “ಕೆಲವು ಶಾಸಕರು ಪಕ್ಷದ ಸಿದ್ಧಾಂತ ಮತ್ತು ಆತ್ಮಸಾಕ್ಷಿಗೆ ವಿರುದ್ಧವಾಗಿ ಮತದಾನ ಮಾಡಿದ್ದಾರೆ. ಇದು ತಾಯಿಗೆ ಮಾಡಿದ ದ್ರೋಹದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜಕೀಯದಲ್ಲಿ ಪಕ್ಷಗಳು ನಿಂತ ನೀರಲ್ಲ. ಬಿಜೆಪಿ ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದೆ. ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಇರುವವರು ಪಕ್ಷ ತೊರೆಯಬಹುದು, ಆದರೆ ಕಾರ್ಯಕರ್ತರನ್ನು ಹಾಳು ಮಾಡಬಾರದು” ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರವಾಗಿದ್ದು, ಅವರ ಸಂಘಟನಾ ಕಾರ್ಯಕ್ಕೆ ಬೆಂಬಲವಿದೆ. ಪಕ್ಷವನ್ನು ಕಟ್ಟುವ ಶಕ್ತಿ ಕಾರ್ಯಕರ್ತರಲ್ಲಿ ಇನ್ನೂ ಇದೆ ಎಂದು ಡಿ.ಎಸ್. ಅರುಣ್ ಹೇಳಿದರು ಈಂದಿನ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಸಿ.ಮಲತೇಶ, ಚಂದ್ರಶೇಖರ, ಮಂಜುನಾಥ್,ಶರತ್ ಕಲ್ಯಾಣಿ, ಶ್ರೀ ನಾಗ, ಇತರರು ಉಪಸ್ಥಿತರಿದ್ದರು.





