100 ವರ್ಷದ ಯಶೋಗಾಥೆಗೆ ಸಾಕ್ಷಿಯಾದ ಧರ್ಮಸಭೆ – ಸಹಕಾರ ಕ್ಷೇತ್ರಕ್ಕೆ ಮಾದರಿಯಾದ ಶಿವಮೊಗ್ಗದ ಐತಿಹಾಸಿಕ ಸಂಸ್ಥೆ
ಶಿವಮೊಗ್ಗದ ಹೆಮ್ಮೆಯ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ “ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ (ನಿ.)” ತನ್ನ ಶತಮಾನೋತ್ಸವ ಸಂಭ್ರಮವನ್ನು ಭವ್ಯವಾಗಿ ಆಚರಿಸಿತು. ಕಾರ್ಯಕ್ರಮವು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಹಾಗೂ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಅವರ ಪವಿತ್ರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ, “ಒಂದು ಶತಮಾನದಿಂದ ಸಹಕಾರ ತತ್ವದ ಅಡಿಯಲ್ಲಿ ಜನಸಾಮಾನ್ಯರು, ವ್ಯಾಪಾರಸ್ಥರು ಹಾಗೂ ರೈತರಿಗೆ ಆರ್ಥಿಕ ಆಸರೆಯಾಗಿರುವ ಈ ಸಂಸ್ಥೆಯ ಸಾಧನೆ ಇಡೀ ಜಿಲ್ಲೆಗೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಸ್. ಷಡಾಕ್ಷರಿ, “ಶಿವಮೊಗ್ಗದಲ್ಲಿ ಸುಮಾರು 40 ಸಾವಿರ ಲಿಂಗಾಯತ ಸಮಾಜ ಬಾಂಧವರು ಇದ್ದರೂ ಸಂಘದ ಸದಸ್ಯತ್ವ ಕೇವಲ 5,500ಕ್ಕೆ ಸೀಮಿತವಾಗಿದೆ. ಉತ್ತರ ಕರ್ನಾಟಕದ ಸಹಕಾರ ಸಂಘಗಳು ಶಿವಮೊಗ್ಗದಲ್ಲಿ ವಿಸ್ತಾರವಾಗುತ್ತಿರುವ ಈ ಸಂದರ್ಭದಲ್ಲಿ ಸದಸ್ಯತ್ವ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ಕರೆ ನೀಡಿದರು.
1925ರಲ್ಲಿ ಕೇವಲ 46 ಸದಸ್ಯರು ಹಾಗೂ ರೂ.1,150 ಷೇರು ಬಂಡವಾಳದೊಂದಿಗೆ ಆರಂಭವಾದ ಈ ಸಂಘವು ಇಂದು 5,520 ಸದಸ್ಯರನ್ನು ಹೊಂದಿದ್ದು, ರೂ.13 ಕೋಟಿ ಠೇವಣಿ, ರೂ.7.80 ಕೋಟಿ ಸಾಲ ವಿತರಣೆ ಹಾಗೂ ರೂ.24 ಕೋಟಿ ದುಡಿಯುವ ಬಂಡವಾಳದೊಂದಿಗೆ ಆರ್ಥಿಕವಾಗಿ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. 2025-26ನೇ ಸಾಲಿನಲ್ಲಿ ಸಂಘವು ಸುಮಾರು ರೂ.50 ಕೋಟಿ ವಹಿವಾಟು ನಡೆಸಿ, ರೂ.50 ರಿಂದ 70 ಲಕ್ಷದವರೆಗೆ ಲಾಭ ಗಳಿಸಿದೆ. ಜೊತೆಗೆ ಕೆ.ಎಸ್.ಸಿ.ಸಿ ಬ್ಯಾಂಕ್‌ನಲ್ಲಿ ರೂ.14 ಕೋಟಿ ಠೇವಣಿ ಇಡಲಾಗಿದೆ.
ಶಿವಮೊಗ್ಗದ ವೀರಶೈವ ಸಮಾಜದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಾಪಿತವಾದ ಈ ಸಂಸ್ಥೆ, ಲಿಂಗಾಯತ ಸಮಜದವರಿಗೆ ಸಾಲ ಹಾಗೂ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಶತಮಾನದಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಸಣ್ಣ ಹೊಳೆಯಾಗಿ ಆರಂಭವಾದ ಸಂಘ ಇಂದು ಬೃಹತ್ ನದಿಯಂತೆ ಬೆಳೆಯಲು ಅನೇಕ ಹಿರಿಯರ ಪರಿಶ್ರಮವೇ ಕಾರಣವೆಂದು ಸ್ಮರಿಸಲಾಯಿತು.
ಈ ಶತಮಾನೋತ್ಸವದ ಸವಿ ನೆನಪಿಗಾಗಿ ಸಂಘವು ಸ್ಮರಣ ಸಂಚಿಕೆಯನ್ನು ಹೊರತಂದಿದ್ದು, ಸದಸ್ಯರ ಅನುಕೂಲಕ್ಕಾಗಿ ಭದ್ರತಾ ಕಪಾಟುಗಳ (ಸೇಫ್ ಲಾಕರ್ಸ್) ಸೇವೆಯನ್ನೂ ಇತ್ತಿಚೆಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಡಾ. ಧನಂಜಯ ಸರ್ಜಿ, ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಹುಲ್ಲುಳಿ, ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸೇರಿದಂತೆ ಹಲವು ಗಣ್ಯರು, ಸಹಕಾರ ಕ್ಷೇತ್ರದ ಎಸ್.ಕೆ. ಮರಿಯಪ್ಪ ಮತ್ತು ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.









