ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್‌ಗಳು ಹಾಗೂ ತಿಂಡಿ–ತಿನಿಸು ಅಂಗಡಿಗಳಲ್ಲಿ ನಿಷೇಧಿತ ಟೇಸ್ಟಿಂಗ್ ಪೌಡರ್ (ಅಜಿನಮೋಟೋ) ಮತ್ತು ರಾಸಾಯನಿಕ ಬಣ್ಣಗಳ ಬಳಕೆ ನಡೆಯುತ್ತಿದೆ ಎಂದು ಆರೋಪಿಸಿ, ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿs.
ಆಹಾರ ಸುರಕ್ಷತಾ ಕಾಯ್ದೆಯ ಪ್ರಕಾರ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಟೇಸ್ಟಿಂಗ್ ಪೌಡರ್ ಹಾಗೂ ರಾಸಾಯನಿಕ ಬಣ್ಣಗಳ ಬಳಕೆ ನಿಷೇಧಿತವಾಗಿದ್ದು, ಇವುಗಳ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಸಂಭವ ಸಾಧ್ಯತೆ ಇದೆ ಎಂದು ಎನ್.ಎಸ್.ಯು.ಐ. ತಿಳಿಸಿದೆ. ಆದರೆ ಪಾಲಿಕೆ ವ್ಯಾಪ್ತಿಯ ಹಲವು ಹೋಟೆಲ್‌ಗಳು, ನಾನ್‌ವೆಜ್ ಅಂಗಡಿಗಳು, ಚಾಟ್ಸ್ ಅಂಗಡಿಗಳು ಹಾಗೂ ಫುಟ್‌ಪಾತ್ ತಿಂಡಿ ಗಾಡಿಗಳಲ್ಲಿ ಅಜಿನಮೋಟೋ ಬಳಕೆ ಮುಂದುವರಿದಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ನಿಗಾ ವಹಿಸಬೇಕಾದ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಎನ್.ಎಸ್.ಯು.ಐ. ಆರೋಪಿಸಿದೆ. ಶಿವಮೊಗ್ಗದ ಫುಡ್ ಕೋರ್ಟ್ ಸೇರಿದಂತೆ ಬಹುತೇಕ ತಿಂಡಿ–ತಿನಿಸು ಅಂಗಡಿಗಳಲ್ಲಿ ಅಜಿನಮೋಟೋ ಬಳಕೆಯಿಂದ ಸಾರ್ವಜನಿಕರ ಆರೋಗ್ಯ ಅಪಾಯದಲ್ಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಎಲ್ಲಾ ಹೋಟೆಲ್ ಹಾಗೂ ತಿಂಡಿ ಅಂಗಡಿಗಳ ಮೇಲೆ ತಕ್ಷಣ ತಪಾಸಣೆ ನಡೆಸಿ, ನಿಷೇಧಿತ ಪದಾರ್ಥ ಬಳಸುವವರ ವಿರುದ್ಧ ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕರ್ತವ್ಯಲೋಪ ಎಸಗಿರುವ ಪಾಲಿಕೆ ಆರೋಗ್ಯಾಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಎನ್.ಎಸ್.ಯು.ಐ. ಒತ್ತಾಯಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎನ್.ಎಸ್.ಯು.ಐ. ನಗರಾಧ್ಯಕ್ಷ ರವಿಕುಮಾರ್, ನಗರ ಉಪಾಧ್ಯಕ್ಷ ಆದಿತ್ಯ, ಸುಭಾನ್ ಸೇರಿದಂತೆ ವರುಣ್ ಪಂಡಿತ್, ಶ್ರೀಕಾಂತ್, ವಿಕ್ರಂ, ಅಭಿಷೇಕ್, ವಿಕಾಸ್, ಪ್ರಮೋದ್, ಥೌಪಿಕ್, ಹಾಲಸ್ವಾಮಿ, ಸೃಜನ್, ಕೌಶಿಕ್, ಯೂಸೋಫ್, ರಿಹಾನ್, ಕಿರಣ್, ಪ್ರಜ್ವಲ್, ಸಾದ್ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.






