ಶಿವಮೊಗ್ಗ–ಸಾಗರ ರಸ್ತೆಯ ಲಯನ್ ಸಫಾರಿ ಸಮೀಪ ರಾಷ್ಟ್ರೀಯ ಹೆದ್ದಾರಿ–206ರಲ್ಲಿ ನಿರ್ಮಾಣಗೊಂಡಿದ್ದ ಭಾರೀ ಹಾಗೂ ಅಪಾಯಕಾರಿ ಗುಂಡಿ ವಾಹನ ಸವಾರರ ಜೀವಕ್ಕೆ ಗಂಭೀರ ಅಪಾಯವಾಗಿತ್ತು. ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ನೂರಾರು ವಾಹನ ಸವಾರರು ಭಯಭೀತರಾಗಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗಿದ್ದವು.
ಗುಂಡಿಯ ಕಾರಣದಿಂದಾಗಿ ಹಲವು ವಾಹನಗಳು ಹಾನಿಗೊಳಗಾಗಿದ್ದು, ಪ್ರಯಾಣಿಕರು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಈ ಅಪಾಯಕಾರಿ ಗುಂಡಿಯ ಫೋಟೋ ಸಹಿತ ದೂರುವನ್ನು ಪ್ರಯಾಣಿಕರು ಎರಡು ದಿನಗಳ ಹಿಂದೆ ಸಾತ್ವಿಕ ನುಡಿ ಪತ್ರಿಕೆಗೆ ಕಳುಹಿಸಿದ್ದರು. ವಿಷಯದ ಗಂಭೀರತೆಯನ್ನು ಮನಗಂಡು, ಸಾತ್ವಿಕ ನುಡಿ ಲೈವ್ ವೆಬ್ ನ್ಯೂಸ್‌ನಲ್ಲಿ ಸುದ್ದಿ ಪ್ರಕಟಿಸಲಾಗಿದ್ದು, ಮಾನ್ಯ ಶಿವಮೊಗ್ಗ ಸಂಸದರಾದ ಅಭಿವೃದ್ಧಿಯ ಹರಿಕಾರ ಶ್ರೀ ಬಿ.ವೈ. ರಾಘವೇಂದ್ರ ಅವರ ವಾಟ್ಸಪ್ ಸಂಖ್ಯೆಗೆ ಮಾಹಿತಿ ರವಾನಿಸಲಾಯಿತು.
ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಸಂಸದರು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಗುಂಡಿಯನ್ನು ಮುಚ್ಚಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದ್ದು, ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ.
ಈ ತ್ವರಿತ ಹಾಗೂ ಹೊಣೆಗಾರಿಕೆಯ ಸ್ಪಂದನೆಗಾಗಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳಿಗೆ ಪ್ರಯಾಣಿಕರು ಸಾತ್ವಿಕ ನುಡಿ ಪತ್ರಿಕೆಯ ಮುಖಾಂತರ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.









