ಶಿವಮೊಗ್ಗ–ಸಾಗರ ರಸ್ತೆಯ ಲಯನ್ ಸಫಾರಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿರ್ಮಾಣಗೊಂಡಿರುವ ಭಾರೀ ಗುಂಡಿ ಇದೀಗ ವಾಹನ ಸವಾರರ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಗುಂಡಿಯ ಕಾರಣದಿಂದ ಈಗಾಗಲೇ ಶಿವಮೊಗ್ಗದ ವಿನೋಬನಗರದ ನಿವಾಸಿ ರಂಗಾ ಎಂಬ ಯುವಕನೊಬ್ಬರು ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ. ಆದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಾರ್ಗದಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರು ಭಯಭೀತರಾಗಿದ್ದು, ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ವರದಿಯಾಗಿವೆ. ಕೆಲವರು ಹಿಡಿ ಶಾಪ ಹಾಕುತ್ತಾ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಗುಂಡಿ ಕಾಣಿಸದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಸ್ಥಳೀಯರ ಆತಂಕ.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿವಮೊಗ್ಗ ಸಂಸದರು ಇದರ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ಗುಂಡಿಯನ್ನು ಮುಚ್ಚಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







