ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ರೈತರಿಂದ ಜಿಲ್ಲಾಧಿಕಾರಿಗೆ ಮನವಿ ಗ್ರಾಮದ ರೈತರು ಬುಧವಾರ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮೆಕ್ಕೆಜೋಳ ಖರೀದಿಯಲ್ಲಿ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಗಂಭೀರವಾಗಿ ವಿರೋಧಿಸಿದರು. ಕರ್ನಾಟಕದಲ್ಲಿ ಕೃಷಿ ಭೂಮಿಯಲ್ಲಿ ಅತಿ ಹೆಚ್ಚು ಬೆಳೆಸಲಾಗುವ ಬೆಳೆಗಳಲ್ಲಿ ಮೆಕ್ಕೆಜೋಳ ಪ್ರಮುಖವಾಗಿದ್ದು, ರಾಜ್ಯ ಮಟ್ಟದಲ್ಲಿ ಸುಮಾರು 40% ರೈತರು ಮೆಕ್ಕೆಜೋಳವನ್ನು ಬೆಳೆದಿದ್ದಾರೆ.
ಕೇಂದ್ರ ಸರ್ಕಾರವು ಅಕ್ಟೋಬರ್ 15 ರಂದು ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹2400ರ ಬೆಂಬಲ ಬೆಲೆ (MSP) ನಿಗದಿ ಮಾಡಿದ್ದರೂ, ರಾಜ್ಯ ಸರ್ಕಾರವು ಇನ್ನೂ ಖರೀದಿ ಕೇಂದ್ರಗಳನ್ನು ತೆರೆಯದೇ “ಮಿನ್ಮೇಷ ಎಣಿಸುತ್ತಿದೆ” ಎಂದು ರೈತರು ಆರೋಪಿಸಿದರು. ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಬೆಂಬಲ ಬೆಲೆಯ ಭರವಸೆ ಕೇವಲ ಕಾಗದದಲ್ಲೇ ಉಳಿಯುವ ಭೀತಿ ವ್ಯಕ್ತವಾಗಿದೆ.
ರೈತರ ಪರವಾಗಿ ತ್ಯಾಜವಳ್ಳಿಯ ಯುವ ರೈತರಾದ ವಿವೇಕ್, ರುದ್ರೇಶ್, ಮರಿಗೌಡ್ರು, ಹರೀಶ್‌ಗೌಡ್ರು ಮತ್ತು ಬಿಂದುಕುಮಾರ್ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು. ತಕ್ಷಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ಹಿತ ರಕ್ಷಿಸಬೇಕೆಂದು ಅವರು ಆಗ್ರಹಿಸಿದರು.
“ಖರೀದಿ ಕೇಂದ್ರ ಚಾಲನೆ ಮಾಡಿದರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ. ಬೆಂಬಲ ಬೆಲೆ ಘೋಷಣೆಗೊಂಡ ಬಳಿಕವೂ ಖರೀದಿ ಪ್ರಕ್ರಿಯೆ ಆರಂಭವಾಗದಿರುವುದು ರೈತರ ಬದುಕಿಗೆ ಮತ್ತೊಂದು ಹೊಡೆತವಾಗಿದೆ,” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರೈತರ ಬೇಡಿಕೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ಭರವಸೆ ನೀಡಿದರೆ, ಆರಂಭಿಕ ಹಂತದಲ್ಲೇ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.






