ಸೋರಬ : ಬಂಗಾರದಮಾದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪನವರ 93ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ, ಅವರ ಪುತ್ರ ಹಾಗೂ ರಾಜ್ಯದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪನವರು ಈಂದು ಭಂಗಾರಧಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಬಂಗಾರಪ್ಪನವರ ಜನ್ಮದಿನವನ್ನು ಆಚರಿಸುವ ಸಂಪ್ರದಾಯವಿದ್ದರೂ, ಈ ಬಾರಿ ವಿಶೇಷವಾಗಿ ಸೊರಬ ತಾಲ್ಲೂಕಿನ ಮುಖಂಡರು, ಹಿರಿಯರು, ಅಭಿಮಾನಿಗಳು ಹಾಗೂ ಸ್ನೇಹಿತರು ಸೇರಿಕೊಂಡು ಕುಟುಂಬ ಸಮೇತ ಭಂಗಾರಧಾಮದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಬೆಳಗ್ಗೆ ಭಂಗಾರಧಾಮದಲ್ಲಿ ಪೂಜೆ ಸಲ್ಲಿಸಿ ನಂತರ ರಂಗಮಂದಿರದಲ್ಲಿ “ಬಂಗಾರಪ್ಪ ಚಿಂತನೆ” ಕುರಿತ ಚಿಂತನ ಗೋಷ್ಠಿ ನಡೆಯಲಿದೆ. ಈ ಸಂದರ್ಭದಲ್ಲಿ ಬಂಗಾರಪ್ಪನವರ ಜೀವನ, ರಾಜಕೀಯ ದೃಷ್ಟಿಕೋನ ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಪ್ರಮುಖರು ಮಾತನಾಡಿರುವ ವಿಡಿಯೋ ಪ್ರದರ್ಶನ ಮತ್ತು ಗೌರವ ಸಮಾರಂಭ ಕೂಡ ನಡೆಯಲಿದೆ.
ಸಂಜೆಯ ವೇಳೆಗೆ ಮಂಗಳೂರಿನ ಆಳ್ವಾಸ್ ಸಂಸ್ಥೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ, ಕಾರ್ಮಿಕ ಸಚಿವ ಸಂತೋಷ ಲಾಡ್, ಹಿರಿಯ ನಾಯಕ ದೇಶಪಾಂಡೆ, ತಿಲಕ್ ವರ್ಮಾ, ಬೇಳೂರು ಗೋಪಾಲಕೃಷ್ಣ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.






