ಶಿವಮೊಗ್ಗ : ನಗರದ ವಾರ್ತ ಇಲಾಖೆಯ ವಾಹನ ಚಾಲಕರಾದ ರವಿಕುಮಾರ್ ಅವರ ಸುಪುತ್ರ ಅಭಿಲಾಷ ಎಂ.ಆರ್. ಅವರು ವಿದ್ಯಾಭ್ಯಾಸ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿ. ನಗರದ ಪ್ರಸಿದ್ಧ ಎನ್.ಪಿ.ಎಸ್. ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಅವರು, ಕಳೆದ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 86% ಅಂಕಗಳನ್ನು ಪಡೆದು ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳ ಸ್ಥಾನ ಪಡೆದಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ, ಶಾಲೆಯು ಆಯೋಜಿಸಿದ್ದ 2025–2026ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ, ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮದಲ್ಲಿ ಅಭಿಲಾಷ ಎಂ.ಆರ್. ಅವರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗ ಹಾಗೂ ಪೋಷಕರ ಸಂಘದ ವತಿಯಿಂದ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಹಿರಿಯ ಅತಿಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ, ಅವರು ಮುಂದಿನ ದಿನಗಳಲ್ಲಿ ಸಮಾಜದ ಪ್ರಗತಿಗೆ ಪ್ರೇರಣೆಯಾಗಬೇಕು ಎಂದು ಹಾರೈಸಿದರು.
ಇದೇ ವೇಳೆ, ಅಭಿಲಾಷ ಎಂ.ಆರ್. ಅವರು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ವಿಚಾರಗಳಲ್ಲಿ ಆಸಕ್ತಿ ತೋರಿಸುತ್ತಾ, ಶಿವಮೊಗ್ಗ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಚುರುಕಾದ ಮಾತುಕತೆ, ವಿಚಾರ ಮಂಡನೆ ಹಾಗೂ ನಾಯಕತ್ವ
ಕೌಶಲ್ಯದಿಂದ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನಗರದ ಪೆಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಅಭ್ಯಾಸ ಮಾಡುತ್ತಿರುವ ಅವರು, ಈ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ.
ಅಭಿಲಾಷ ಅವರ ಈ ಸಾಧನೆಯು ಪೋಷಕರು, ಗುರುಗಳು ಹಾಗೂ ಸಹಪಾಠಿಗಳಲ್ಲಿ ಹೆಮ್ಮೆ ಉಂಟುಮಾಡಿದೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅವರ ಪ್ರತಿಭೆಯನ್ನು ಮೆಚ್ಚಿ, ರಾಜ್ಯ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವ ಪ್ರತಿಭೆಗಳಿಗೆ ವೇದಿಕೆಯಾಗಿ ಯುವ ಸಂಸತ್ ಸ್ಪರ್ಧೆಗಳು ಕೆಲಸ ಮಾಡುತ್ತಿರುವುದಾಗಿ, ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ಸಕಾರಾತ್ಮಕ ಬದಲಾವಣೆಗೆ ಕಾರಣರಾಗುವ ನಿರೀಕ್ಷೆ ವ್ಯಕ್ತವಾಯಿತು.
 







