ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಹೊಸ ಆಶಾಕಿರಣ ಶಿವಮೊಗ್ಗ:
ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರಿಗೆ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವ ನವೀನ ಯೋಜನೆ — ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿರುವ “ಕಾಯಕ ಸೇತು” ಜಾಬ್ ಪೋರ್ಟಲ್ ಲೋಕಾರ್ಪಣೆ ಇಂದು ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಪಟ್ಟಾಭಿರಾಮ್ ಸಮಾರಂಭವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಅವರು ಹೇಳಿದರು:
“ಕಾಯಕ ಸೇತು ಅಂದ ಕೂಡಲೇ ನೆನಪಾಗುವುದು ಬಸವಣ್ಣನ ವಾಕ್ಯ — ‘ಕಾಯಕವೇ ಕೈಲಾಸ’. ಕಾಯಕವಿಲ್ಲದೆ ಕೈಲಾಸವಿಲ್ಲ. ಕೈಲಾಸ ಸತ್ತ ನಂತರ ಸಿಗುವುದಲ್ಲ, ನಾವಿರುವಾಗಲೇ ಅನುಭವಿಸಬಹುದಾದುದು. ಶರಣರ ಸೇವೆ ಕಾಯಕ, ಶರಣನ ಸೇವೆಯೇ ಶಿವನ ಸೇವೆ ಎಂಬುದು ಬಸವಣ್ಣನ ಕಲ್ಪನೆ.”
ಅವರು ಮುಂದುವರೆದು ಹೇಳಿದರು — “ಹೊಸ ಚಿಗರು ಹಳೆಯ ಬೇರು ಸೇರಿದರೆ ಮರದ ಸೊಬಗು ಹೆಚ್ಚುತ್ತದೆ. ಹೀಗೆಯೇ ಹೊಸ ಯುಕ್ತಿ ಹಳೆಯ ತತ್ವ ಸೇರಿ ಧರ್ಮದ ನಿತ್ಯತೆಯನ್ನು ಪ್ರತಿಪಾದಿಸುತ್ತದೆ. ಶಿವನ ಗಂಟಲಲ್ಲಿ ವಿಷವನ್ನು ನಿಲ್ಲಿಸಿದ ಘಟನೆಯು ಸೈನ್ಸ್‌ನ ಅಡಿಪಾಯವೇ ಆಗಿದೆ. ಆ ಕಾಲದಲ್ಲಿಯೇ ವಿಜ್ಞಾನ ಅಷ್ಟೊಂದು ಮುಂದುವರಿದಿತ್ತು,” ಎಂದು ವಿಶ್ಲೇಷಿಸಿದರು.
ಉದ್ಯೋಗಕ್ಕಾಗಿ ಕಾಯಕ ಸೇತು: ವಿವರಣೆ ನೀಡಿದ ಡಾ. ಧನಂಜಯ್ ಸರ್ಜಿ
ರಾಜ್ಯದಲ್ಲಿ 4,430 ಪದವಿ ಕಾಲೇಜುಗಳು ಹಾಗೂ 26 ವಿಶ್ವವಿದ್ಯಾಲಯಗಳು ಇವೆ. ಪ್ರತಿ ವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಾರೆ, ಆದರೆ ಬಹುತೇಕರು ಉದ್ಯೋಗದ ಭಾಗ್ಯ ಕಾಣದೆ ಪರಿತಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಪದವೀಧರ ಯುವಕ-ಯುವತಿಯರಿಗೆ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಲು ಹಾಗೂ ಅವರಿಗೆ ಸೂಕ್ತ ವೇದಿಕೆ ಒದಗಿಸಲು, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರ ಸಂಪರ್ಕ ಕಚೇರಿಯಿಂದ “ಕಾಯಕ ಸೇತು” ಎಂಬ ಉಚಿತ ಜಾಬ್ ಪೋರ್ಟಲ್ ನಿರ್ಮಿಸಿ ಕಾರ್ಯಾರಂಭ ಮಾಡಲಾಗಿದೆ.
ಮುಂದೆ ಇದನ್ನು ಉಳಿದ ಜಿಲ್ಲೆಗಳಿಗೂ ವಿಸ್ತರಿಸಿ, ಅಗತ್ಯವಿದ್ದಲ್ಲಿ ರಾಜ್ಯಮಟ್ಟಕ್ಕೆ ವಿಸ್ತರಿಸುವ ಯೋಜನೆ ಸರ್ಜಿಯವರ ಮುಂದಿದೆ.
ಜಾಬ್ ಪೋರ್ಟಲ್‌ನ ವಿಶೇಷತೆಗಳು
ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಗಳ HR (ಹ್ಯೂಮನ್ ರಿಸೋರ್ಸ್) ವಿಭಾಗಗಳು ಈ ಪೋರ್ಟಲ್‌ನಲ್ಲಿ ಉದ್ಯೋಗ ಮಾಹಿತಿ ಹಂಚಿಕೊಳ್ಳುತ್ತವೆ.
ಪದವೀಧರರು ತಮ್ಮ ರೆಸ್ಯುಮ್ ಅಥವಾ CV ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದರೆ, ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಸಂಸ್ಥೆಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಆಯ್ಕೆಯಾದವರಿಗೆ ಮಾಹಿತಿ ಪೋರ್ಟಲ್ ಮೂಲಕ ತಲುಪುತ್ತದೆ.
ಆಯ್ಕೆ ಆಗದ ಅಭ್ಯರ್ಥಿಗಳಲ್ಲಿ ಇರುವ ಕೌಶಲ್ಯದ ಕೊರತೆಯನ್ನು ಗುರುತಿಸಿ, ಸರ್ಜಿ ಫೌಂಡೇಶನ್ ಅವರಿಂದ ಆ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.
ಅಭ್ಯರ್ಥಿಗಳು ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಪ್ರೊಫೈಲ್ ನವೀಕರಿಸಬೇಕು.
ಮುಂದಿನ ಹಂತದಲ್ಲಿ ಆನ್‌ಲೈನ್ ಎಂಟ್ರನ್ಸ್ ಟೆಸ್ಟ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಶಿವಮೊಗ್ಗ ನಗರದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಡಾ. ಧನಂಜಯ್ ಸರ್ಜಿ ಅವರ ವಿಧಾನ ಪರಿಷತ್ ಸಂಪರ್ಕ ಕಚೇರಿಯೂ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ:ಶ್ರೀ ಪಟ್ಟಾಭಿರಾಮ್,ಸಂಸದರು ಬಿ.ವೈ. ರಾಘವೇಂದ್ರ,ಶಾಸಕರಾದ ಎಸ್.ಎನ್. ಚನ್ನಬಸಪ್ಪ,ವಿಧಾನ ಪರಿಷತ್ ಸದಸ್ಯರಾದ ಅರುಣ್,ಮತ್ತು ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಸ್ಥಳೀಯ ಪ್ರತಿಭೆಗೆ ಸ್ಥಳೀಯ ಉದ್ಯೋಗ ಎಂಬ ಧ್ಯೇಯದೊಂದಿಗೆ ಕಾಯಕ ಸೇತು — ಯುವಕರಿಗೆ ಹೊಸ ನಂಬಿಕೆ, ಹೊಸ ದಾರಿ.
 







