ಶಿವಮೊಗ್ಗ: ಮೆಗ್ಗಾನ್ ಬೋಧನಾ ಆಸ್ಪತ್ರೆಯ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಎಂ.ಎಸ್. ಡಾ. ತಿಮ್ಮಪ್ಪ ಮತ್ತು ಡಿ.ಎಸ್. ಡಾ. ಸಿದ್ದಪ್ಪನವರು ಇಂದು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಆಸ್ಪತ್ರೆಯ ಸೇವೆಗಳ ಬಗ್ಗೆ ವಿವರಿಸಿದರು.
ಮೆಗ್ಗಾನ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅತ್ಯುತ್ತಮ ಮಟ್ಟದ ಚಿಕಿತ್ಸಾ ಸೇವೆ ನೀಡಲಾಗುತ್ತಿದೆ ಎಂದು ಡಾ. ವಿರೂಪಾಕ್ಷಪ್ಪ ಹೇಳಿದರು. “ಸಿನಿಯರ್ ಡಾಕ್ಟರ್‌ಗಳು ಬೆಳಿಗ್ಗೆ ವಾರ್ಡುಗಳಿಗೆ ಭೇಟಿ ನೀಡಿ ಬಳಿಕ ಓಪಿಡಿಯಲ್ಲಿ ಸೇವೆ ನೀಡುತ್ತಾರೆ. ಮಧ್ಯಾಹ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಇದು ಮೆಡಿಕಲ್ ಕಾಲೇಜು ಆಸ್ಪತ್ರೆ ಆಗಿರುವುದರಿಂದ ವೈದ್ಯರು ವಿವಿಧ ಒತ್ತಡಗಳ ಮಧ್ಯೆಯೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ,” ಎಂದರು.
ನ್ಯೂರೋ ತಜ್ಞರು ಇಬ್ಬರು ಮಾತ್ರ ಇದ್ದು, ಅವರು ಓಪಿಡಿ ಮತ್ತು ಶಸ್ತ್ರಚಿಕಿತ್ಸೆ ಎರಡನ್ನೂ ನಿರ್ವಹಿಸುತ್ತಿರುವುದರಿಂದ ಪ್ರತಿದಿನ ಓಪಿಡಿಯಲ್ಲಿ ಹಾಜರಾಗುವುದು ಸಾಧ್ಯವಿಲ್ಲ ಎಂದರು.
ಸಿಮ್ಸ್ ಕಾಲೇಜು 2005-06ರಲ್ಲಿ ಪ್ರಾರಂಭವಾಗಿ 2007ರಿಂದ ಪ್ರವೇಶ ಆರಂಭವಾಯಿತು. 2012ರಲ್ಲಿ ಶಾಶ್ವತ ಮಾನ್ಯತೆ ದೊರಕಿತು. ಈಗ ಪ್ಯಾರಾಮೆಡಿಕಲ್, ಪಿಹೆಚ್‌ಎಸ್ ಮತ್ತು ನರ್ಸಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ, ಮಕ್ಕಳ ಆಸ್ಪತ್ರೆ, ವಸತಿ ಗೃಹ, ಯುಜಿ ಹಾಸ್ಟೆಲ್, ಆಧುನಿಕ ಶವಗಾರ ಮುಂತಾದ ಸೌಕರ್ಯಗಳಿವೆ. ಒಟ್ಟು 237 ಕ್ವಾಟರ್ಸ್ ಮನೆಗಳಿವೆ ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆ 1200 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಮೂರು-ನಾಲ್ಕು ಘಟಕಗಳು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜನವರಿಯಿಂದ ಆಗಸ್ಟ್ ತನಕ ಪ್ರತಿ ದಿನ ಸರಾಸರಿ 4500 ಒಳ ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಖರ್ಚು ಇಲ್ಲದೆ ರೋಗಿಗಳಿಗೆ ಸೇವೆ ಲಭ್ಯವಾಗುತ್ತಿದೆ. ಪ್ರತಿ ತಿಂಗಳು 3000 ಪೇಷಂಟ್‌ಗಳು ಎ.ಬಿ.ಎ.ಆರ್ಕೆ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿವರ್ಷ ಈ ಯೋಜನೆಯಡಿ ಸುಮಾರು ₹200 ಕೋಟಿ ಮೌಲ್ಯದ ಸೇವೆ ನೀಡಲಾಗುತ್ತಿದೆ.
ಪ್ರತಿದಿನ 50-60 ಮೇಜರ್ ಸರ್ಜರಿ ಮತ್ತು 130-140 ಮೈನರ್ ಸರ್ಜರಿಗಳು ನಡೆಯುತ್ತಿವೆ. ನವಜಾತ ಶಿಶುಗಳಲ್ಲಿ ಪ್ರತಿತಿಂಗಳು ಸುಮಾರು 240 ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.
ಎಂ.ಆರ್.ಐ. ಯಂತ್ರದಲ್ಲಿ ದಿನಕ್ಕೆ 25-30 ಸ್ಕ್ಯಾನಿಂಗ್‌ಗಳು ನಡೆಯುತ್ತಿವೆ. ಹೊರಗಡೆ ₹10-15 ಸಾವಿರ ವೆಚ್ಚವಾಗುವ ಸ್ಕ್ಯಾನ್ ಇಲ್ಲಿಗೆ ₹1500-2000 ಕ್ಕೇ ಲಭ್ಯ.
ಸಿಟಿಸ್ಕ್ಯಾನ್‌ನಲ್ಲಿ ಪ್ರತಿ ದಿನ 125 ಜನರಿಗೆ, ಎಕ್ಸ್-ರೇಯಲ್ಲಿ 370-400 ಜನರಿಗೆ, ಅಲ್ಟ್ರಾಸೌಂಡ್‌ನಲ್ಲಿ 100 ಜನರಿಗೆ ಸೇವೆ ನೀಡಲಾಗುತ್ತಿದೆ.
ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಪ್ರತ್ಯೇಕ ಓಪಿಡಿ ವ್ಯವಸ್ಥೆ ಮಾಡಲಾಗಿದೆ. ವಾರಕ್ಕೆ ಎರಡು ದಿನ ಸೇವೆ ನೀಡಲಾಗುತ್ತಿದ್ದು, ಸಿಬ್ಬಂದಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಎಂಟು ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ನಾಲ್ಕು ಮಾದರಿಯ ಮಡ್ಯೂಲರ್ ಆಪರೇಷನ್ ಥಿಯೇಟರ್‌ಗಳು ನಿರ್ಮಿಸಲಾಗಿದೆ. ಔಷಧಿಗಳನ್ನು ಎ.ಬಿ.ಎ.ಆರ್.ಕೆ. ಆಯುಷ್ಮಾನ್, ಬಿಪಿಎಲ್ ಕಾರ್ಡ್ ಮತ್ತು ಇತರೆ ಯೋಜನೆಗಳಡಿ ಪ್ರತಿ ವರ್ಷ ₹20-25 ಕೋಟಿಯ ಮೌಲ್ಯದ ಮೆಡಿಸಿನ್ ಪೂರೈಸಲಾಗುತ್ತಿದೆ.
ಎಂ.ಎಸ್. ಡಾ. ತಿಮ್ಮಪ್ಪ ಮಾತನಾಡಿ “ಉಪ ಲೋಕಾಯುಕ್ತರು ಭೇಟಿ ನೀಡಿದಾಗ ಯಾವುದೇ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಹೆರಿಗೆ ವಾರ್ಡ್‌ನಲ್ಲಿ ಲಂಚ ಕುರಿತು ಯಾರೂ ದೂರು ನೀಡಿಲ್ಲ. ಪುರುಷ ಅಟೆಂಡರ್‌ರನ್ನು ಹೆರಿಗೆ ವಾರ್ಡ್‌ನಲ್ಲಿ ನಿಷೇಧಿಸಲಾಗಿದೆ. ಮಕ್ಕಳ ಕಳ್ಳತನ ತಡೆಗೆ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಓಬಿಜಿ ಲೇಬರ್ ವಾರ್ಡ್ ಮತ್ತು ಎನ್‌ಎಸ್‌ಯುಐ ವಿಭಾಗಗಳಲ್ಲಿ ಹೆಚ್ಚು ದೂರುಗಳು ಬಂದಿದ್ದರಿಂದ ವಿಶೇಷ ಗಮನ ಹರಿಸಲಾಗಿದೆ,” ಎಂದರು.
“ಆಸ್ಪತ್ರೆಯಲ್ಲಿ 500 ಶೌಚಾಲಯಗಳಿದ್ದು, 11 ಸಾವಿರ ಜನರ ರೊಟೇಷನ್ ಇದೆ. ಪ್ರತಿ ಶೌಚಾಲಯವನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ಕೆಲವೊಮ್ಮೆ ಪುರುಷರು ಎಣ್ಣೆ ಬಾಟಲಿಗಳು ಹಾಗೂ ಮಹಿಳೆಯರು ಪ್ಯಾಡ್‌ಗಳನ್ನು ಒಳಗೆ ಹಾಕುವುದು ಸಮಸ್ಯೆ ಉಂಟುಮಾಡುತ್ತದೆ. ಆದರೆ ಮಾಧ್ಯಮಗಳಲ್ಲಿ ಹೇಳುವಂತೆ ಗಂಭೀರ ಸಮಸ್ಯೆಗಳಿಲ್ಲ,” ಎಂದು ಸ್ಪಷ್ಟಪಡಿಸಿದರು.
 





