ಶಿವಮೊಗ್ಗ, ಅ.11: ಶಿವಮೊಗ್ಗ ನಗರದಲ್ಲಿ ಸಮಾನ ಮನಸ್ಕರ “ಶಿವ ಸಂಕಲ್ಪ ವೀರಶೈವ–ಲಿಂಗಾಯತ ಒಕ್ಕೂಟ” ಸಂಘಟನೆಯ ಕುರಿತು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಹಾಲಿಂಗ ಶಾಸ್ತ್ರೀಯವರು, “ಪ್ರಸ್ತುತ ನಮ್ಮ ವೀರಶೈವ–ಲಿಂಗಾಯತ ಸಮಾಜದಲ್ಲಿ ಸಂಘಟನೆಯ ವಿಷಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಅವರು ಮುಂದುವರೆದು, “ರಾಜ್ಯದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ಸಮುದಾಯವಾಗಿದ್ದರೂ, ನಮ್ಮೊಳಗಿನ ಭೇದಭಾವಗಳಿಂದ ಸಮಾಜ ಇಂದು ಒಗ್ಗಟ್ಟಿಲ್ಲದೆ ಒಡೆದ ಮನೆಯಂತಾಗಿದೆ. ಕೆಲವರು ಸ್ವಹಿತಾಸಕ್ತಿಯಿಂದ ಸಮಾಜವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವುದು ಕಳವಳಕಾರಿ ವಿಚಾರ. ಬಸವ ಶರಣರು ಪ್ರತಿಪಾದಿಸಿದ ಸಮ ಸಮಾಜದ ತತ್ವ ಇಂದು ಉಪಜಾತಿ, ಪಂಗಡಗಳ ಹೆಸರಲ್ಲಿ ಮಂಕು ಬಿದ್ದಿದೆ,” ಎಂದರು.
“ಹಿಂದೆ ಕಾಯಕದಿಂದ ಜಾತಿ ಗುರುತಿಸಲಾಗುತ್ತಿದ್ದರೆ, ಇಂದು ಅದೇ ಜಾತಿಯ ಹೆಸರಲ್ಲಿ ವಿಭಜನೆ ಆಗುತ್ತಿದೆ. ಇಂತಹ ವಿಭಜನೆಗಳಿಂದ ಹೊರಬಂದು, ಎಲ್ಲರನ್ನು ಒಗ್ಗೂಡಿಸಿ ಶೈವ–ಲಿಂಗಾಯತ ಧರ್ಮದ ದಡಿಯಲ್ಲಿ ತರಬೇಕು. ಅದಕ್ಕಾಗಿ ಸಮಾನ ಮನಸ್ಕರು ಒಂದಾಗಿ ‘ಶಿವ ಸಂಕಲ್ಪ ಒಕ್ಕೂಟ’ ರೂಪಿಸಿದ್ದು, ಸಮಾಜದ ಒಗ್ಗಟ್ಟಿಗಾಗಿ ಈ ವೇದಿಕೆ ಕಾರ್ಯನಿರ್ವಹಿಸಲಿದೆ,” ಎಂದು ಹೇಳಿದರು.
ಮಹಾಲಿಂಗ ಶಾಸ್ತ್ರೀಯವರು ಮುಂದುವರಿದು, “ರಾಜ್ಯದಾದ್ಯಂತ ವಿವಿಧ ಉಪಜಾತಿ ನಾಯಕರ ಜೊತೆ ಸಂವಾದ ನಡೆಸಿ ಒಮ್ಮತ ಮೂಡಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಇದರ ಫಲವಾಗಿ ‘ಶಿವ ಸಂಕಲ್ಪ’ ದಡಿಯಲ್ಲಿ ಸಮಾಜವನ್ನು ಸಂಘಟಿಸಿ ಮುನ್ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಹೇಳಿದರು.
ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಮುಂದಿನ ಹೆಜ್ಜೆಗಳನ್ನು ಚರ್ಚಿಸಲು ಅ.14 ರಂದು ಸಂಜೆ 6 ಗಂಟೆಗೆ ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ. ಈ ಸಭೆಗೆ ವೀರಶೈವ–ಲಿಂಗಾಯತ ಬಂಧುಗಳು ಆಗಮಿಸುವಂತೆ ಅವರು ಕೋರಿದರು.
“ಶಿವ ಸಂಕಲ್ಪದ ವಿಶ್ವಾಸ” ಮಾತನಾಡಿ, “ಈ ಸಂಘಟನೆ ಶ್ರೀಮಂತರಿಗಷ್ಟೇ ಸೀಮಿತವಾಗದೆ ಬಡವರು, ಹಿಂದುಳಿದವರಿಗೂ ಹಾಗೂ ಎಲ್ಲಾ ಒಳಪಂಗಡಗಳ ಯುವಕರು ಮತ್ತು ಮಹಿಳೆಯರು ಭಾಗವಹಿಸುವ ಅವಕಾಶ ಕಲ್ಪಿಸಲಿದೆ. ಅ.14ರ ಕಾರ್ಯಕ್ರಮದಲ್ಲಿ 1000 ಜನರನ್ನು ಸೇರಿಸಲು ಪ್ರಯತ್ನಿಸಲಾಗುತ್ತಿದೆ,” ಎಂದು ಹೇಳಿದರು.





