ಜಮಖಂಡಿ:ಅಲಗೂರು ಗ್ರಾಮದ ಪತ್ರಿಕಾ ವರದಿಗಾರ ಬಸವರಾಜ ರಾಮಪ್ಪ ಖಾನಗೊಂಡ್ (40) ಅವರ ಸಾವುಗೆ ಸಂಬಂಧಿಸಿದ ಪ್ರಕರಣದಲ್ಲಿ ತೀವ್ರ ತನಿಖೆ ನಡೆಸಿದ ಫಲವಾಗಿ, ಪ್ರಾಥಮಿಕವಾಗಿ ಹಿಟ್ ಅಂಡ್ ರನ್ ಅಪಘಾತ ಎಂದು ದಾಖಲಾಗಿದ್ದ ಘಟನೆ ಉದ್ದೇಶಪೂರ್ವಕ ಕೊಲೆ ಪ್ರಕರಣ ಎಂದು ಪತ್ತೆಯಾಗಿದೆ.
ಘಟನೆ ಅಕ್ಟೋಬರ್ 8, 2025ರಂದು ಮದರಕಂಡಿ ಗ್ರಾಮದ ಬಳಿ ಸಂಭವಿಸಿತ್ತು. ಪ್ರಾರಂಭದಲ್ಲಿ, ಮೃತರ ಪತ್ನಿಯ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 106 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ತನಿಖಾ ಅಧಿಕಾರಿಗಳು ಘಟನೆಯ ಸ್ವರೂಪದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಸ್ಥಳ ಪರಿಶೀಲನೆ, ತಾಂತ್ರಿಕ ಪುರಾವೆಗಳ ವಿಶ್ಲೇಷಣೆ ಹಾಗೂ ಸ್ಥಳೀಯರ ವಿಚಾರಣೆ ನಡೆಸಿದಾಗ ಅಪಘಾತದ ಲಕ್ಷಣಗಳು ಉದ್ದೇಶಪೂರ್ವಕ ದಾಳಿಯಂತಿವೆ ಎಂಬುದು ಸ್ಪಷ್ಟವಾಯಿತು. ತನಿಖೆಯ ಬಳಿಕ ಅಶೋಕ್ ಲೇಲ್ಯಾಂಡ್ ದೋಸ್ತ್ ಪ್ಲಸ್ ಮಿನಿ ಗೂಡ್ಸ್ ವಾಹನ (KA-48-A-1732) ಈ ಅಪಘಾತದಲ್ಲಿ ಬಳಸಲ್ಪಟ್ಟಿದೆ ಎಂಬುದು ಪತ್ತೆಯಾಯಿತು. ಈ ವಾಹನ ಅಶ್ಫಾಕ್ ಸುಲೇಮಾನ್ ಮುಲ್ಲಾ (26, ಬಾರಪೆಟ್ ಗಲ್ಲಿ, ರಬ್ಕವಿ–ಬನಹಟ್ಟಿ) ಅವರ ಹೆಸರಿನಲ್ಲಿ ನೋಂದಾಯಿತವಾಗಿದೆ.
ಪೊಲೀಸರು ವಾಹನವನ್ನು ವಶಪಡಿಸಿಕೊಂಡು, ಪ್ರಮುಖ ಆರೋಪಿ ಅಶ್ಫಾಕ್ ಸುಲೇಮಾನ್ ಮುಲ್ಲಾ ಹಾಗೂ ಅವರ ಸಹಚರರಾದ ಹೊಸೂರು ಗ್ರಾಮದ ನಂದೀಶ್ವರ್ ಮಹಾದೇವ ಪವಾಡಿ ಮತ್ತು ಮಹೇಶ್ ಶಿಶೈಲ್ ಪವಾಡಿ ಅವರನ್ನು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ಅಶ್ಫಾಕ್ ತಮ್ಮ ತಪ್ಪೊಪ್ಪಿಗೆಯಲ್ಲಿ, ಬಸವರಾಜ ಖಾನಗೊಂಡ ಅವರನ್ನು ಉದ್ದೇಶಪೂರ್ವಕವಾಗಿ ವಾಹನದಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅವರು ಹೇಳುವಂತೆ, ಮೃತ ಬಸವರಾಜ ಅವರು ಕಳೆದ ನಾಲ್ಕು ವರ್ಷಗಳಿಂದ ತಮ್ಮ ಪಿಡಿಎಸ್ ಅಕ್ಕಿ ಅಕ್ರಮ ವ್ಯಾಪಾರ ಬಯಲಿಗೆಳೆಯುವ ಬೆದರಿಕೆ ನೀಡಿ ಹಣ ವಸೂಲಿ ಮಾಡುತ್ತಿದ್ದರು.
ಅಶ್ಫಾಕ್ ಅವರು ಮಾಸಿಕವಾಗಿ ಹಣವನ್ನು ಫೋನ್‌ಪೇ ಮೂಲಕ ವರ್ಗಾವಣೆ ಮಾಡುತ್ತಿದ್ದರು ಎಂಬುದು ಬ್ಯಾಂಕ್ ದಾಖಲೆಗಳಿಂದ ದೃಢಪಟ್ಟಿದೆ. ಅಲ್ಲದೆ, ಹಣದ ವ್ಯವಹಾರಕ್ಕೆ ಸಂಬಂಧಿಸಿದ ಕರೆ ರೆಕಾರ್ಡಿಂಗ್‌ಗಳು ಆರೋಪಿಯ ಮೊಬೈಲ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಹತ್ಯೆಯ ವಿವರ :
ಅಂದು ಬೆಳಿಗ್ಗೆ ಅಶ್ಫಾಕ್ ಮತ್ತು ಬಸವರಾಜ ಅವರು ತೇರ್ಡಾಲ್‌ನ ಹೋಟೆಲ್‌ನಲ್ಲಿ ಹಣದ ವಿಚಾರವಾಗಿ ಭೇಟಿಯಾಗಿದ್ದರು. ಮಧ್ಯಾಹ್ನ 3.30ಕ್ಕೆ ಬಸವರಾಜ ತಮ್ಮ ಸ್ಕೂಟಿಯಲ್ಲಿ ಜಮಖಂಡಿಯತ್ತ ಹೊರಟರು. ಅವರ ಚಲನವಲನವನ್ನು ನಂದೀಶ್ವರ್ ಮತ್ತು ಮಹೇಶ್ ಹಿಂಬಾಲಿಸುತ್ತಿದ್ದರು.
ಬಸವರಾಜ ಮದರಕಂಡಿ ಸಮೀಪ ತಲುಪಿದಾಗ, ಅಶ್ಫಾಕ್ ತಮ್ಮ ಸರಕು ವಾಹನವನ್ನು ತಪ್ಪು ಬದಿಯಿಂದ ಚಲಾಯಿಸಿ ಉದ್ದೇಶಪೂರ್ವಕವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ತೀವ್ರ ಗಾಯಗೊಂಡ ಬಸವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ, ಆರೋಪಿ ಅಶ್ಫಾಕ್, ನಂದೀಶ್ವರ್ ಮತ್ತು ಮಹೇಶ್ ಸ್ಥಳದಿಂದ ಪರಾರಿಯಾದರು. ನಂತರ ಅಶ್ಫಾಕ್ ಅವರ ಸಹೋದರ ಯೂಸುಫ್ ಸುಲೇಮಾನ್ ಮುಲ್ಲಾ ಅವರ ಸಹಾಯದಿಂದ ವಾಹನವನ್ನುಮುಚ್ಚಿ ಡಾಲಾಗಿತ್ತು.
ಸಿಸಿಟಿವಿ ದೃಶ್ಯಗಳು, ಡಿಜಿಟಲ್ ಸಾಕ್ಷ್ಯಗಳು, ಸಾಕ್ಷಿದಾರರ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಪುರಾವೆಗಳನ್ನು ಆಧಾರವಾಗಿ ಪಡೆದು, ಹಿಟ್ ಅಂಡ್ ರನ್ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ.
ಬಂಧಿತರ ಮಾಹಿತಿ:
ಅಶ್ಫಾಕ್ ಸುಲೇಮಾನ್ ಮುಲ್ಲಾ (26)
ನಂದೀಶ್ವರ್ ಮಹಾದೇವ ಪವಾಡಿ
ಮಹೇಶ್ ಶಿಶೈಲ್ ಪವಾಡಿ
ಮತ್ತೊಬ್ಬ ಆರೋಪಿ ಯೂಸುಫ್ ಸುಲೇಮಾನ್ ಮುಲ್ಲಾ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ಶೋಧಿಸುವ ತನಿಖೆ ಮುಂದುವರಿದಿದೆ.
– ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ
 






