ಶಿವಮೊಗ್ಗ ತಾಲೂಕು ತ್ಯಾಜವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಯ 69ನೇ ವಾರ್ಷಿಕ ಮಹಾಸಭೆ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಪತ್ರಕರ್ತ ಸತೀಶ್ ಮುಂಚೆಮನೆಯವರು 12 ಸದಸ್ಯರಿಗೂ ಸ್ವಾಗತ ನೇರವೇರಿಸಿ, “ಸಹಕಾರ ಅಂದರೆ ಒಬ್ಬರಿಗಾಗಿ ಎಲ್ಲರು, ಎಲ್ಲರಿಗಾಗಿ ಒಬ್ಬರು” ಎಂಬ ತತ್ತ್ವದಡಿ ಸಂಘವು 69 ವರ್ಷಗಳಿಂದ ಶ್ರೇಷ್ಠ ಸೇವೆ ಸಲ್ಲಿಸುತ್ತಿದ್ದು, ಇಂದು 1425ಕ್ಕೂ ಹೆಚ್ಚು ಸದಸ್ಯರೊಂದಿಗೆ ಸದೃಢವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಸಾಲಿನಲ್ಲಿ 1 ಕೋಟಿ 30 ಲಕ್ಷ ರೂಪಾಯಿ ವಹಿವಾಟು ನಡೆಸಿರುವುದು ಹೆಮ್ಮೆಯ ವಿಚಾರ. ಸದಸ್ಯರು ಎಸ್.ಬಿ. ಖಾತೆ ತೆರೆಯುವುದು, ಎಫ್.ಡಿ. ಮಾಡುವುದು, ಯಶಸ್ವಿನಿ ಕಾರ್ಡ್ ಹಾಗೂ ಕೇವಲ 880 ರೂಪಾಯಿಗಳ ವಿಮೆ ಮಾಡಿಸಿಕೊಳ್ಳುವುದು ಅತೀ ಅಗತ್ಯ. ಇದರಿಂದ ಸದಸ್ಯರಿಗೆ ಸಾಲ ಸೌಲಭ್ಯ, ಭದ್ರತೆ ದೊರೆಯುತ್ತದೆ” ಎಂದು ತಿಳಿಸಿದರು.
ಅಧ್ಯಕ್ಷ ದೇವರಾಜ್ ವಕೀಲರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ನಮ್ಮ ಅವಧಿಯಲ್ಲಿ ರೈತರಿಗೆ ಷೇರುಬಾಂಡ್ ವಿತರಣೆ, ಗೊಬ್ಬರದ ಸಕಾಲ ಪೂರೈಕೆ, ಸುಸಜ್ಜಿತ ಕಚೇರಿ ನಿರ್ಮಾಣ ಗುರಿ ಕೈಗೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಅಕಾಲಿಕವಾಗಿ ಮೃತಪಟ್ಟ 6 ಷೇರುದಾರರು ವಿಮೆ ಮಾಡಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಇಂತಹ ದುರಂತ ತಪ್ಪಿಸಲು ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ SSLC ಹಾಗೂ PUC ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಜೊತೆಗೆ, ಸಂಘದಲ್ಲಿ ಹೆಚ್ಚಿನ ಠೇವಣಿ ಇಟ್ಟಿರುವ ಷೇರುದಾರರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಅಶೋಕ ಅವರು ವಂದನಾಪೂರ್ಣೆಯೊಂದಿಗೆ ಸಮಾರೋಪಗೊಳಿಸಿದರು.
 








