ಶಿವಮೊಗ್ಗ(shivamogga), ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೆನೆ ಎಂದು ಹೇಳಿ ಭಾರೀ ಸಂಚಲನ ಸೃಷ್ಟಿಸಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು, ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ಇತ್ತೀಚೆಗೆ ಚಿನ್ನಯ್ಯನನ್ನು ಬಂಧಿಸಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತನ್ನ ವಶಕ್ಕೆ ಪಡೆದುಕೊಂಡಿತ್ತು
ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 6 ರಂದು ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಚಿನ್ನಯ್ಯನನ್ನು ಎಸ್ಐಟಿ ತಂಡ ಹಾಜರುಪಡಿಸಿತ್ತು.
ಈ ವೇಳೆ ಚಿನ್ನಯ್ಯನನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಭದ್ರತಾ ದೃಷ್ಟಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಚಿನ್ನಯ್ಯನನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಲಭ್ಯ ಮಾಹಿತಿ ಅನುಸಾರ, ಈಗಾಗಲೇ ಚಿನ್ನಯ್ಯನನ್ನು ಬಿಗಿ ಭದ್ರತೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಎಸ್ಐಟಿ ತಂಡ ಕರೆತರಲಾರಂಭಿಸಿದೆ. ರಾತ್ರಿ 11 ರಿಂದ 12 ಗಂಟೆ ವೇಳೆಗೆ ಕಾರಾಗೃಹಕ್ಕೆ ತಲುಪುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಭದ್ರತೆ ದೃಷ್ಟಿಯಿಂದ ಚಿನ್ನಯ್ಯನಿಗೆ ಜೈಲ್ ನಲ್ಲಿ ಪ್ರತ್ಯೇಕ ಸೆಲ್ ನಲ್ಲಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿಯೂ ತಿಳಿದುಬಂದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.