ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸರ್ಕಾರದ ವಿರೋಧ ಪಕ್ಷದ ನಾಯಕರು

0
8

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟಕ್ಕಾಗಿ ಸೂಕ್ತ ವ್ಯಕ್ತಿಯ ಹುಡುಕಾಟವನ್ನು ಬಿಜೆಪಿ ಹೈಕಮಾಂಡ್ ಮುಂದು ವರಿಸಿರುವುದರ ನಡುವೆಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡಲು ಸಲಹೆ ನೀಡಿರುವುದು ಬೆಳಕಿಗೆ ಬಂದಿದೆ.
ಅತ್ತ ಬಿಜೆಪಿ ಹೈಕಮಾಂಡ್ ಸಹ ಯಡಿಯೂರಪ್ಪನವರ ಸಲಹೆಯನ್ನು ತೆಗೆದುಹಾಕದ ಪರಿಸ್ಥಿತಿಯಲ್ಲಿದ್ದು, ಅವರ ಸಲಹೆಯನ್ನೇ ಒಪ್ಪಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಹೈಕಮಾಂಡ್ ಜೊತೆಗೆ ಮಾತನಾಡಿರುವ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರ ಗಾದಿಗೆ ಶೋಭಾ ಕರಂದ್ಲಾಜೆ ಅವರೇ ಸೂಕ್ತ ವ್ಯಕ್ತಿ.

ಮಹಿಳೆಯರಿಗೆ ನಮ್ಮ ಪಕ್ಷದಲ್ಲಿ ಒಂದು ಮಹತ್ವದ ಪಟ್ಟ ಕೊಟ್ಟ ನೀಡಿದಂತಾಗುತ್ತದೆ. ಶೋಭಾ ಅವರು ರಾಜ್ಯ ಸಚಿವರಾಗಿ, ಕೇಂದ್ರದಲ್ಲಿ ಸಚಿವರಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ರಾಜ್ಯಾಧ್ಯಕ್ಷರ ಪಟ್ಟ ಕೊಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಿಂದ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಆ ಸ್ಥಾನದ ನೇಮಕಾತಿಯು ಬಾಕಿ ಇದ್ದು, ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿಯೂ ಬಾಕಿಯಿದೆ. ಇಲ್ಲಿ ಜಾತಿ ವಿಚಾರ ಮುನ್ನಲೆಗೆ ಬಂದಿದೆ. ವಿಪಕ್ಷ ನಾಯಕರ ಸ್ಥಾನವನ್ನು ಲಿಂಗಾಯತರಿಗೆ ಕೊಟ್ಟರೆ, ರಾಜ್ಯ ಬಿಜೆಪಿ ಚುಕ್ಕಾಣಿಯನ್ನು ಒಕ್ಕಲಿಗರಿಗೆ ಕೊಡಬೇಕು. ಇಲ್ಲವೇ, ವಿಪಕ್ಷ ಸ್ಥಾನದ ಹುದ್ದೆಯನ್ನು ಒಕ್ಕಲಿಗರಿಗೆ ನೀಡಿದರೆ, ರಾಜ್ಯ ಬಿಜೆಪಿ ಅಧ್ಯಕ್ಷರ ಸ್ಥಾನವನ್ನು ಲಿಂಗಾಯತರಿಗೆ ಬಿಟ್ಟುಕೊಡಬೇಕು ಎಂಬ ವಾದ ಪ್ರಬಲವಾಗಿ ಕೇಳಿಬರುತ್ತಿದೆ.
ರಾಜ್ಯ ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (ಲಿಂಗಾಯತ), ಅಶ್ವತ್ಥ ನಾರಾಯಣ್ (ಒಕ್ಕಲಿಗ), ಆರ್. ಅಶೋಕ್ (ಒಕ್ಕಲಿಗ), ಶ್ರೀರಾಮುಲು (ಎಸ್‍ಟಿ), ಸುನೀಲ್ ಕುಮಾರ್ (ಒಬಿಸಿ), ಸಿ.ಟಿ.ರವಿ (ಒಕ್ಕಲಿಗ) ಹೆಸರುಗಳು ಮುಂಚೂಣಿಯಲ್ಲಿವೆ. ಇದರ ಜೊತೆಗೆ ವಿ. ಸೋಮಣ್ಣ ಕೂಡ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟಕ್ಕೂ ಇವರ ಹೆಸರುಗಳೇ ಬಹುತೇಕ ಮಂಚೂಣಿಯಲ್ಲಿವೆ. ಆದರೆ ಇಲ್ಲಿ ಲಿಂಗಾಯತ – ಒಕ್ಕಲಿಗ ಸಮುದಾಯಗಳೇ ಸ್ಪರ್ಧೆಯ ಅಂತಿಮ ಕಣದಲ್ಲಿವೆ ಎಂದು ಹೇಳಲಾಗಿದೆ.

ಯಡಿಯೂರಪ್ಪನವರನ್ನು ಕಡೆಗಣಿಸಿದರೆ ಏನಾಗುತ್ತೆ ಎಂಬುದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‍ಗೆ ಅರಿವಾಗಿದೆ. ಅಲ್ಲದೆ ಯಡಿಯೂರಪ್ಪನವರ ಪ್ರಭಾವ ಲಿಂಗಾಯತ ಸಮೂಹದ ಮೇಲೆ ಎಷ್ಟರ ಮಟ್ಟಿಗಿದೆ ಎಂಬುದು ಹೈಕಮಾಂಡ್‍ಗೆ ಗೊತ್ತಾಗಿದೆ. 2012-13ರಲ್ಲೂ ಯಡಿಯೂರಪ್ಪನವರನ್ನು ಕೈಬಿಟ್ಟು ಇದೇ ರೀತಿಯ ಪಾಠ ಕಲಿತಿತ್ತು ಬಿಜೆಪಿ. ಈಗ ಪುನಃ ಪಾಠ ಕಲಿತಿದೆ. ಹಾಗಾಗಿ, ಯಡಿಯೂರಪ್ಪನವರ ಸಲಹೆಯನ್ನು ಪಡೆದುಕೊಳ್ಳುವುದು ಹೈಕಮಾಂಡ್ ಗೂ ಅನಿವಾರ್ಯವಾಗಬಹುದು.

ಅದಲ್ಲದೆ ಮುಂದಿನ ವರ್ಷ ಲೋಕಸಭೆ ಚುನಾವಣೆಯಿದೆ. ಯಡಿಯೂರಪ್ಪನವರ ಸಲಹೆಯನ್ನು ಸ್ವೀಕರಿಸಿ ಶೋಭಾ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷೆಯನ್ನಾಗಿಸಿದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ. ಒಂದು ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟಿದ್ದು ಲಿಂಗಾಯತ ಸಮುದಾಯವನ್ನು ಖುಷಿಯಾಗಿಸಿದರೆ ಮತ್ತೊಂದು ಶೋಭಾರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವುದರಿಂದ ಒಕ್ಕಲಿಗರ ಪ್ರೀತಿಯನ್ನು ಪಡೆದಂತಾಗುತ್ತದೆ ಎಂಬ ಅನಿಸಿಕೆಯೂ ಹೈಕಮಾಂಡ್ ನೊಳಗಿದೆ.

ಇದೆಲ್ಲಾ ಬಿಟ್ಟು ಮತ್ತೊಂದು ಲೆಕ್ಕಾಚಾರವೂ ಬಿಜೆಪಿ ಹೈಕಮಾಂಡ್‍ಗೆ ಇದೆ. ಪಕ್ಷದ ಧುರೀಣರಾದ ಸಂತೋಷ್ ಜೀ ಅವರ ಕಾರ್ಯತಂತ್ರ ಈ ಬಾರಿಯ ಚುನಾವಣೆಯಲ್ಲಿ ವಿಫಲವಾಗಿದೆ. ಆ ಮೂಲಕ ಸಂತೋಷ್ ಮತ್ತವರ ಟೀಂ ಸೈಡ್‍ಲೈನ್ ಆಗಿದೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಧುರೀಣರೊಬ್ಬರು ಬೇಕಿದ್ದು, ಅಂಥ ವ್ಯಕ್ತಿ ಯಡಿಯೂರಪ್ಪ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬುದು ಹೈಕಮಾಂಡ್‍ಗೆ ಮನದಟ್ಟಾಗಿದೆ. ಆ ನಿಟ್ಟಿನಲ್ಲಿ ಯಡಿಯೂರಪ್ಪನವರು ನೀಡಿರುವ ಸಲಹೆಯನ್ನು ಹೈಕಮಾಂಡ್ ಪರಿಗಣಿಸುತ್ತದೆ ಎಂದೇ ಹೇಳಲಾಗುತ್ತಿದೆ.