ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿಜಯ್ ಚಿಕಿತ್ಸೆ ಫಲಕಾರಿಯಾಗದೆ ಮರಣ
ಶಿವಮೊಗ್ಗ: ಗಾಜನೂರಿನ ಸಕ್ರೆಬೈಲಿನ ಪ್ರಸಿದ್ಧ “ಪ್ರಕೃತಿ ಫಿಶ್ ಹೋಟೆಲ್” ಮಾಲೀಕ ವಿಜಯ್ ಕುಮಾರ್ (42) ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಸೋಮವಾರ ರಾತ್ರಿ ಶಿವಮೊಗ್ಗದಿಂದ ಸಕ್ರೆಬೈಲು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅರಕೆರೆ ಸಮೀಪ ಅಪಘಾತ ಸಂಭವಿಸಿತ್ತು. ಅಪಘಾತದ ಪರಿಣಾಮ ವಿಜಯ್ ಕುಮಾರ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಕಳೆದ ರಾತ್ರಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ.
ಗಾಜನೂರಿನಲ್ಲಿ ಮೊದಲ ಬಾರಿಗೆ ಫಿಶ್ ಹೋಟೆಲ್ ಆರಂಭಿಸಿ ತಮ್ಮ ಆತ್ಮೀಯ ಸೇವೆ ಮತ್ತು ನಗುಮುಖದ ಆತಿಥ್ಯದಿಂದ ಪರಿಚಿತರಾಗಿದ್ದ ವಿಜಯ್ ಕುಮಾರ್, ಗ್ರಾಹಕರನ್ನು “ಬನ್ನಿ ಅಣ್ಣ” ಎಂದು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದವರು. ಅವರ ಅಕಾಲಿಕ ನಿಧನದ ಸುದ್ದಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜನರಲ್ಲಿ ದುಃಖ ಮೂಡಿಸಿದೆ.





