ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಯಾಗಿ ಬಂದಿರುವ ಶ್ರೀ ಬಿ. ನಿಖಿಲ್ ಐಪಿಎಸ್ ಅವರು ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತಾವು 2017ನೇ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದು, ಈ ಹಿಂದೆ ಬಟ್ಕಳದಲ್ಲಿ ಅಡಿಷನಲ್ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದಾಗಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಗೆ ಗಟ್ಟಿಯಾದ ಇತಿಹಾಸವಿದ್ದು, ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಒಟ್ಟಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯ ಎಂದರು.
ಸಂತ್ರಸ್ತರು ಠಾಣೆಗೆ ಬಂದಾಗ ಅವರಿಗೆ ಗೌರವಯುತ ವರ್ತನೆ ನೀಡಬೇಕು ಎಂಬುದನ್ನು ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಹೇಳಿದರು.
ನಾಳೆಯಿಂದಲೇ ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಗೆ ಭೇಟಿ ನೀಡುತ್ತೇನೆ ಎಂದು ಘೋಷಿಸಿದರು.
ವಾಟ್ಸಪ್ ಗ್ರುಪ್ ಸಂಪರ್ಕ – ಪಬ್ಲಿಕ್ ವಾಟ್ಸಪ್ ಚಾನಲ್ ಆರಂಭ ಸಾರ್ವಜನಿಕರು ಯಾವುದೇ ಸಮಸ್ಯೆ ಇದ್ದರೂ 24 ಗಂಟೆಯೂ ವಾಟ್ಸಪ್ ಮೂಲಕ ಸಂದೇಶ ಕಳುಹಿಸಬಹುದು. ಈ ಸಂಬಂಧ ವಾಟ್ಸಪ್ ಪಬ್ಲಿಕ್ ಚಾನಲ್ ಆರಂಭಿಸಲಾಗುವುದು ಎಂದು ಎಸ್ಪಿ ನಿಖಿಲ್ ತಿಳಿಸಿದರು
ಶಿವಮೊಗ್ಗದಲ್ಲಿ ಗಾಂಜಾ ಸೇವನೆ ಅತಿಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು,
ಪೋಷಕರು ತಮ್ಮ ಮಕ್ಕಳು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಹಾಗೂ ಮೊಬೈಲ್ನಲ್ಲಿ ಏನು ನೋಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದು ಸಲಹೆ ನೀಡಿದರು.
ಗಾಂಜಾ ಜಾಲದಲ್ಲಿ ಪೊಲೀಸರೇ ಭಾಗಿಯಾಗಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಸ್ಪೆಂಡ್ ಮಾಡಲಾಗುವುದು. ಈ ಕ್ರಮವನ್ನು ಹಿಂದಿನ ಜಿಲ್ಲೆಯಲ್ಲಿ ಜಾರಿಗೆ ತಂದಿದ್ದೇನೆ ಎಂದರು.
ರಸ್ತೆ ಅಪಘಾತ ನಿಯಂತ್ರಣ – ಎಲ್ಲರ ಹೊಣೆ
ರಸ್ತೆ ಅಪಘಾತ ತಡೆ ಕೇವಲ ಪೊಲೀಸರ ಹೊಣೆ ಅಲ್ಲ, ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದರು.
ಹೆಲ್ಮೆಟ್ ಧರಿಸುವುದು ದಂಡ ತಪ್ಪಿಸಲು ಅಲ್ಲ, ನಿಮ್ಮ ಮನೆಯ ಪ್ರೀತಿಪಾತ್ರರ ನೆನಪಿಗಾಗಿ ಎಂದು ಮನವಿ ಮಾಡಿದರು.
ಭದ್ರಾವತಿ ಮೇಲೂ ವಿಶೇಷ ಗಮನ ಭದ್ರಾವತಿ ರಿಪಬ್ಲಿಕ್ ಆಗಿದೆ” ಎಂಬ ಸಾರ್ವಜನಿಕರ ಮಾತುಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್ಪಿ, ಭದ್ರಾವತಿ ಭಾಗದಲ್ಲಿ ಹೆಚ್ಚುವರಿ ಗಮನ ಹರಿಸಲಾಗುವುದು ಎಂದರು.
ರಾಜಕೀಯ ಒತ್ತಡ ಕುರಿತು ಮಾತನಾಡಿದ ಅವರು, ರಾಜಕೀಯ ಮತ್ತು ಪೊಲೀಸ್ ನಾಣ್ಯದ ಎರಡು ಮುಖಗಳು ಎಂದರು.
ಭದ್ರಾವತಿಯಲ್ಲಿ ಯಾರನ್ನಾದರೂ ಬಂಧಿಸಿದಾಗ ಶಾಸಕರಿಂದ ನೇರವಾಗಿ ಎಸ್ಪಿಗೆ ಕರೆ ಬರುತ್ತದೆ ಎನ್ನುವ ಪ್ರಶ್ನೆಗೆ, ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ತಾವು ಮೂಲತಃ ಚಿತ್ರದುರ್ಗ ಜಿಲ್ಲೆಯವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ಆಯ್ಕೆಯಾಗಿ ಪಡೆದಿದ್ದೇನೆ ಎಂದು ತಿಳಿಸಿದರು.
ಈ ಹಿಂದೆ ಕಾಡು ಪ್ರದೇಶಗಳಲ್ಲಿ ಹೆಚ್ಚು ಕೆಲಸ ಮಾಡಿದ್ದೆ, ಈಗ ನಾಡಿನ ಸೇವೆಗೆ ಬಂದಿದ್ದೇನೆ ಎಂದು ಹೇಳಿದರು.







