ಸಿದ್ಲಿಪುರ ರೈತ ಭರತ್ ಅವರ ಹಸು-ಎತ್ತು ಪೈನಾನ್ಸ್ ವಶಕ್ಕೆ!
ಶಿವಮೊಗ್ಗ: ತಾಲ್ಲೂಕಿನ ಸಿದ್ಲಿಪುರ ಗ್ರಾಮದ ರೈತ ಭರತ್ ಎಂಬುವವರು ಶಿವಮೊಗ್ಗದ ಗಾರ್ಡನ್ ಏರಿಯಾ ಮೊದಲನೇ ತಿರುವಿನಲ್ಲಿರುವ “ಆಯ್ ಫೈನಾನ್ಸ್” ಎಂಬ ಖಾಸಗಿ ಹಣಕಾಸು ಸಂಸ್ಥೆಯಿಂದ 2ಲಕ್ಷ ಕೃಷಿ ಉದ್ದೇಶಕ್ಕಾಗಿ ಸಾಲ ಪಡೆದಿದ್ದರು. ಆದರೆ ಒಂದು ತಿಂಗಳ ಕಂತು ಪಾವತಿಯಾಗದ ಹಿನ್ನೆಲೆಯಲ್ಲಿ, ಆ ಫೈನಾನ್ಸ್ ಸಂಸ್ಥೆಯವರು ರೈತರ ಮನೆಯ ಬಳಿ ಹೋಗಿ, ಬಲವಂತವಾಗಿ ಅವರ ಹಸು ಮತ್ತು ಎತ್ತುಗಳನ್ನು ಕರೆದುಕೊಂಡು ಬಂದಿದ್ದಾರೆ ಎಂಬ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯಿಂದ ಬೇಸತ್ತ ರೈತರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಯ್ ಫೈನಾನ್ಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಜಿಲ್ಲಾ ಉಪಾಧ್ಯಕ್ಷ ಶೇಖರಪ್ಪ ನೇತೃತ್ವ ವಹಿಸಿದ್ದು, ರಾಜ್ಯ ಉಪಾಧ್ಯಕ್ಷರು ರಾಜು ಮತ್ತು ರಾಘವೇಂದ್ರ, ಎಂ.ಡಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರು, “ಒಂದು ತಿಂಗಳ ಕಂತು ಬಾಕಿ ಇರುವುದು ಕಾನೂನು ಕ್ರಮದ ವಿಷಯ, ಆದರೆ ರೈತರ ಗೌರವ ಹರಣ ಮಾಡುವ ರೀತಿಯಲ್ಲಿ ಹಸು-ಎತ್ತುಗಳನ್ನು ಎಳೆದುಕೊಂಡು ಹೋಗುವುದು ಮಾನವೀಯತೆಯ ವಿರೋಧಿ. ರೈತರ ಬದುಕು ಹಸು-ಎತ್ತಿನ ಮೇಲೆ ನಿಂತಿದೆ, ಅದನ್ನು ಕಸಿದುಕೊಳ್ಳುವುದು ಕ್ರೂರ ಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರು, ಈ ಘಟನೆಯ ಕುರಿತು ತಕ್ಷಣ ತನಿಖೆ ನಡೆಸಿ, ಫೈನಾನ್ಸ್ ಕಂಪನಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೇ, ಸ್ಥಳಕ್ಕೆ ಮಾನ್ಯ ರಕ್ಷಣಾಧಿಕಾರಿಗಳು ಬೇಟಿ ನೀಡಿ, ಪೈನಾನ್ಸ್ ಸಂಸ್ಥೆಯಿಂದ ಪಾರಾರಿಯಾದ ಅಧಿಕಾರಿಗಳನ್ನು ಕರೆಸಿ ರೈತರ ಕ್ಷಮೆ ಕೇಳುವಂತೆ ಹಾಗೂ ಹಸು-ಎತ್ತುಗಳನ್ನು ತಕ್ಷಣ ರೈತರ ಮನೆಗೆ ಹಿಂತಿರುಗಿಸಲು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಹಲವಾರು ರೈತರು ಭಾಗವಹಿಸಿ “ರೈತ ವಿರೋಧಿ ನೀತಿ ನಿಲ್ಲಲಿ”, “ಫೈನಾನ್ಸ್ ದೌರ್ಜನ್ಯ ಬೇಡ” ಎಂಬ ಘೋಷಣೆಗಳನ್ನು ಕೂಗಿ, ಸರ್ಕಾರದ ಹಸ್ತಕ್ಷೇಪವನ್ನು ಕೇಳಿಕೊಂಡರು.
ಈ ಘಟನೆ ರೈತ ಸಮುದಾಯದಲ್ಲಿ ಆತಂಕ ಮತ್ತು ಅಸಮಾಧಾನ ಮೂಡಿಸಿದ್ದು, ಜಿಲ್ಲಾ ಆಡಳಿತದಿಂದ ತ್ವರಿತ ಕ್ರಮದ ನಿರೀಕ್ಷೆಯಿದೆ.
 





