ಶಿವಮೊಗ್ಗ: ಎನ್.ಟಿ. ರಸ್ತೆಯಲ್ಲಿ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ತೀವ್ರ ಗಾಯಗೊಂಡಿದ್ದ ಆರ್.ಎಂ.ಎಲ್ ನಗರದ ನಿವಾಸಿ ಅಮ್ಜದ್ (38) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೂರು ದಿನಗಳ ಹಿಂದೆ ಅಮ್ಜದ್ ಮೇಲೆ ವ್ಯಾಗನರ್ ಕಾರು ಮತ್ತು ಬೈಕ್‌ನಲ್ಲಿ ಬಂದ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಚಾಕುವಿನಿಂದ ಇರಿದು ಗಾಯಗೊಂಡ ಅಮ್ಜದ್ ಅವರನ್ನು ಮೊದಲು ಮೆಗ್ಗಾನ್ ಆಸ್ಪತ್ರೆಗೆ, ನಂತರ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಹಲ್ಲೆಯ ಹಿಂದೆ ಹಣದ ವ್ಯವಹಾರ ಮತ್ತು ಕೇರಂ ಆಟದ ವಿಚಾರ ಕಾರಣವಾಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಮ್ಯಾಕ್ಸ್ ಆಸ್ಪತ್ರೆಯ ಬಳಿ ಅಮ್ಜದ್ ಅವರ ಬಂಧುಬಳಗ ಕಳೆದ ರಾತ್ರಿ ಇಂದೇ ನೆರೆದಿತ್ತು. ಇಂದು ಬೆಳಗ್ಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮ್ಯಾಕ್ಸ್‌ನಿಂದ ಮೆಗ್ಗಾನ್ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಲಾಯಿತು. ನಂತರ ಮನೆಗೆ ಕರೆದುಕೊಂಡು ಹೋಗಿ ಧಾರ್ಮಿಕ ವಿಧಿವಿಧಾನದಂತೆ ಶಿವಮೊಗ್ಗ ಬಸ್ ನಿಲ್ದಾಣದ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ದತೆ ನಡೆದಿದೆ.
ಎಫ್‌ಐಆರ್ ವಿವರಗಳು
ಪೊಲೀಸ್ ದಾಖಲೆ ಪ್ರಕಾರ, ಅಮ್ಜದ್ ಮೇಲಿನ ಹಲ್ಲೆ ಮೊಹಮ್ಮದ್ ಶೋಯೆಬ್ ಅಲಿಯಾಸ್ ‘ಎಂದ್ರಿಲಾ’ ಗ್ಯಾಂಗ್ ಮಾಡಿರುವುದಾಗಿ ದೂರು ದಾಖಲಾಗಿದೆ.
ಎಫ್‌ಐಆರ್ ಪ್ರಕಾರ, ಎನ್.ಟಿ. ರಸ್ತೆಯ ಬಳಿಯ ಕೇರಂ ಕ್ಲಬ್‌ನಲ್ಲಿ ಎಂದ್ರಿಲಾ ಮತ್ತು ಸಂತು ನಡುವೆ ನಡೆದ ಆಟದಲ್ಲಿ ಎಂದ್ರಿಲಾ ಸೋತಿದ್ದಾನೆ. ಹಣ ಕಳೆದುಕೊಂಡ ಕಾರಣಕ್ಕೆ ಜಗಳ ಉಂಟಾಗಿ, ಸಂತು ಈ ವಿಷಯವನ್ನು ಅಮ್ಜದ್‌ಗೆ ತಿಳಿಸಿದ್ದಾರೆ. ಅಮ್ಜದ್ ಈ ಕುರಿತು ಎಂದ್ರಿಲಾಗೆ ಕರೆಮಾಡಿ ಬೈದಿದ್ದರಿಂದ ಕೋಪಗೊಂಡ ಎಂದ್ರಿಲಾ ಸ್ನೇಹಿತರೊಂದಿಗೆ ಅಮ್ಜದ್‌ನ್ನು ಹೆದರಿಸಲು ಯೋಜನೆ ರೂಪಿಸಿದ್ದಾನೆ.
ಗ್ಯಾಂಗ್ ಸದಸ್ಯರು ಗೌರ್ನರ್ ಎಂಬಾತನ ಬಳಿ ಹೋದ ಬಳಿಕ ಲಾಂಗ್‌ಗಳನ್ನು ಪಡೆದು, ವ್ಯಾಗನರ್ ಕಾರಿನಲ್ಲಿ ಐದು ಜನ ಸೇರಿ ಭಾರತ್ ಫೌಂಡರಿ ಬಳಿಯಲ್ಲಿದ್ದ ಅಮ್ಜದ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
 








