ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜು – ವಾಸ್ತು ದೋಷವೋ, ಒತ್ತಡವೋ.!?

0
113

ಶಿವಮೊಗ್ಗ: ನಗರದ ಪ್ರತಿಷ್ಠಿತ ಸಿಮ್ಸ್ ಮೆಡಿಕಲ್ ಕಾಲೇಜು ಆರಂಭವಾದ ನಂತರದಿಂದಲೇ ವಿದ್ಯಾರ್ಥಿಗಳ ಅಕಾಲಿಕ ಸಾವುಗಳು ಪದೇಪದೇ ಸಂಭವಿಸುತ್ತಿವೆ. ಕೆಲವರು ಇದನ್ನು ವಾಸ್ತು ದೋಷ ಎಂದು ವದಂತಿ ಹರಡುತ್ತಿದ್ದರೆ, ಹಲವರು ವಿದ್ಯಾರ್ಥಿಗಳ ಮೇಲೆ ಇರುವ ಅತಿಯಾದ ಓದು-ಮಾನಸಿಕ ಒತ್ತಡವೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾಲೇಜು ಆರಂಭದಿಂದ ಇಂದಿನವರೆಗೆ ಸುಮಾರು 12 ವಿದ್ಯಾರ್ಥಿಗಳು ಅಪಘಾತ ಅಥವಾ ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಪೋಷಕರು ಬಹಳ ಕಷ್ಟ ಪಟ್ಟು ವೈದ್ಯರಾಗಲಿ ಎಂದು ಮಕ್ಕಳನ್ನು ಕಾಲೇಜಿಗೆ ಸೇರಿಸುತ್ತಾರೆ. ಆದರೆ ಇಂತಹ ದುರ್ಘಟನೆಗಳು ಪೋಷಕರ ಕನಸುಗಳಿಗೆ ಧಕ್ಕೆ ತಂದಿವೆ.

ಇತ್ತೀಚೆಗೆ ನಡೆಯಯತ್ತಿರುವ ವಿಧಾನಸಭಾ ಚರ್ಚೆಯಲ್ಲಿ ಗುಡ್ಡಾ ಅಗೆದು ಅಸ್ಥಿಪಂಜರ ಹುಡುಕುವ ವಿಷಯ ದಿನಪೂರ್ತಿ ಚರ್ಚೆಯಾಗಿದ್ದು, ಹಲವು ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸಲಿಲ್ಲ ಎಂಬ ಟೀಕೆ ಕೂಡ ಕೇಳಿಬಂದಿದೆ.

ಆದರೆ ಪಕ್ಷಾತೀತವಾಗಿ ವಿದ್ಯಾರ್ಥಿಗಳ ಪ್ರಾಣಾಪಾಯದ ಬಗ್ಗೆ ಗಂಭೀರವಾಗಿ ಚರ್ಚಿಸಿ, ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಮಾಜದ ವಿವಿಧ ವಲಯಗಳಿಂದ ವ್ಯಕ್ತವಾಗಿದೆ.

ತಜ್ಞರು ಹೇಳುವಂತೆ, ವಿದ್ಯಾರ್ಥಿಗಳಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಬಲಪಡಿಸುವುದು, ಒತ್ತಡ ನಿವಾರಣೆ ಮಾಡಿಸುವುದು, ಜೀವನದ ಮಹತ್ವ ತಿಳಿಸುವುದು ತುರ್ತು ಅಗತ್ಯವಾಗಿದೆ. ಪೋಷಕರ ಕನಸು ನೆರವೇರಲು ಮತ್ತು ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸಲು ಇದು ಮುಖ್ಯವಾಗಿದೆ.

ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು!

ಇದರ ನಡುವೆ, ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ಬಳಿ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಿಮ್ಸ್ ಮೆಡಿಕಲ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಅವರು ಪ್ರಯಾಣಿಸುತ್ತಿದ್ದ ಬೈಕ್ ನಂದಿನಿ ಹಾಲಿನ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ರಸ್ತೆಯ ಮೇಲೆ ಹರಿದ ನೆತ್ತರು ಮತ್ತು ರಕ್ತ ಮಡುವಿನಲ್ಲಿ ಇಬ್ಬರೂ ಬಿದ್ದಿರುವ ದುರಂತ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಈ ಪ್ರಕರಣದ ಕುರಿತು ಸಂಬಂಧಪಟ್ಟವರ ಗಮನ ಸೆಳೆಯುವಂತೆ ಎಂಎಲ್ಸಿ ಡಾ. ದನಂಜಯ ಸರ್ಜಿ ಅವರು ಮನವಿ ಮಾಡಿಲಿ ಎನ್ನುತ್ತಾರೆ ಶಿವಮೊಗ್ಗದ ಸಾರ್ವಜನಿಕರು.