ಶಿವಮೊಗ್ಗ ತಾಲ್ಲೂಕಿನ ಆಯನೂರು ಹೋಬಳಿ ಹೊಸೂರು ಗ್ರಾಮದಲ್ಲಿ ದುಃಖದ ಘಟನೆ ಸಂಭವಿಸಿದೆ. ಗ್ರಾಮದ ಪ್ರಕಾಶ್ ಅವರ ಪುತ್ರ ನಿಶಾಂತ್ ಕೆರೆಯಲ್ಲಿ ಕಾಲು ಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ, ನಿಶ್ಚಿತ್ ಧರಿಸಿದ್ದ ಒಂದು ಚಪ್ಪಲಿ ಕೆರೆಯ ಮೇಲ್ಭಾಗದಲ್ಲಿ ಮತ್ತು ಇನ್ನೊಂದು ನೀರಿನ ಅಂಚಿನಲ್ಲಿ ಪತ್ತೆಯಾಗಿದೆ. ಅಲ್ಲದೆ, ಅವನು ತಂದಿದ್ದ ದ್ವಿಚಕ್ರ ವಾಹನ ಕೆರೆಯ ಹತ್ತಿರ ನಿಲ್ಲಿಸಲಾಗಿತ್ತು. ಈ ದೃಶ್ಯವು ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಕುಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ, ಕೆರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲು ಸೂಚಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಶೋಧ ಕಾರ್ಯ ಪ್ರಾರಂಭಿಸಿದೆ.
ನಿಶ್ಚಿತ್ ಅವರ ತಂದೆ ಪ್ರಕಾಶ್ ಮಾತನಾಡುತ್ತಾ, “ನನ್ನ ಮಗ ಬೆಳಿಗ್ಗೆ ಬೈಕ್‌ನಲ್ಲಿ ಹೊರಟಿದ್ದ ಕೆರೆಯ ಹತ್ತಿರ ಬೈಕ್ ನಿಂತಿದ್ದು, ಚಪ್ಪಲಿಗಳು ಬಿದ್ದಿದ್ದು ಕಂಡುಬಂದಿದೆ. ಏನು ಸಂಭವಿಸಿದೆ ಎಂಬುದು ನನಗೂ ತಿಳಿದಿಲ್ಲ” ಎಂದು ದುಃಖ ವ್ಯಕ್ತಪಡಿಸಿದರು.
ಸ್ಥಳೀಯ ಇಟ್ಟಿಗೆಹಳ್ಳಿ ಗ್ರಾಮಸ್ಥರು ಈ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ನಿಶ್ಚಿತ್ ಗೌಡ ಬದುಕುಳಿದಿದ್ದಾನೆಂಬ ನಿರೀಕ್ಷೆಯಲ್ಲಿ ಶೋಧ ಕಾರ್ಯ ಮುಂದುವರಿಯುತ್ತಿದೆ. ಹೆಚ್ಚಿನ ಮಾಹಿತಿ ಅಗ್ನಿಶಾಮಕ ದಳದ ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಲಭ್ಯವಾಗಲಿದೆ.
ಈ ಘಟನೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಚರ್ಚೆಯ ವಿಷಯವಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ತಂಗಿ ಕಾರ್ಯಾಚರಣೆ ಮುಂದುವರೆಸುತ್ತಿದ್ದಾರೆ.