ವಿದ್ಯಾವಂತರಾಗಿದ್ದೀರಿ, ನಿಮಗಾಗಿ ನೀವು ಭಿಕ್ಷೆ ಬೇಡಬಾರದು: ಮನೆ- BMW ಕಾರು,12 ಕೋಟಿ ರೂ ಜೀವನಾಂಶ ಕೋರಿದ್ದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ
ನವದೆಹಲಿ: ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ 12 ಕೋಟಿ ರೂ. ಜೀವನಾಂಶ, ಬಿಎಂಡಬ್ಲ್ಯೂ ಕಾರು ಹಾಗೂ ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಮಹಿಳೆಯೊಬ್ಬರಿಗೆ, ನೀವೇ ದುಡಿಯಬಹುದಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಮಹಿಳೆಯು ಐಟಿ ವೃತ್ತಿಪರೆ ಎಂಬ ವಿಚಾರ ಗಮನಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಮದುವೆಯಾದ 18 ತಿಂಗಳಿಗೆ ಐಷಾರಾಮಿ ಕಾರು ಬಯುಸುವಿರಾ ಎಂದು ಕೇಳಿದರು.
ಮದುವೆಯಾದ 18 ತಿಂಗಳೊಳಗೆ ಪತಿಯಿಂದ ಬೇರ್ಪಟ್ಟ ನಂತರ ಮಹಿಳೆಯೊಬ್ಬರು ಮುಂಬೈನಲ್ಲಿ ಮನೆ ಮತ್ತು ಜೀವನಾಂಶವಾಗಿ 12 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ವಿಚಾರಣೆ ಆಲಿಸಿದ ನ್ಯಾಯಮೂರ್ತಿಗಳು “ಆಪ್ ಇತ್ನಿ ಪಡಿ ಲಿಖಿ ಹೈ. ಆಪ್ಕೋ ಖುಡ್ಕೋ ಮಂಗ್ನಾ ನಹಿ ಚಾಹಿಯೇ ಔರ್ ಖುಡ್ಕೋ ಕಾಮ ಕೆ ಖಾನಾ ಚಾಹಿಯೇ. (ನೀವು ತುಂಬಾ ವಿದ್ಯಾವಂತರು. ನೀವು ನಿಮಗಾಗಿ ಸಂಪಾದಿಸಬೇಕು ಮತ್ತು ಅದನ್ನು ಕೇಳಬಾರದು)” ಎಂದು ಹೇಳಿದರು.
ಅಲ್ಲದೆ, ಎಂಬಿಎ ಪದವಿಧರರಾದ ನಿಮಗೆ ಬೆಂಗಳೂರು, ಹೈದರಾಬಾದ್‌ನಂತಹ ಸ್ಥಳಗಳಲ್ಲಿ ವೃತ್ತಿ ಮುಂದುವರೆಸಲು ಹೇರಳ ಅವಕಾಶಗಳಿವೆ. ನಿಮಗೆ ಈಗಾಗಲೇ ನೀಡಲು ಒಪ್ಪಿರುವಂತಹ 4 ಕೋಟಿ ರೂ. ಜೀವನಾಂಶ ಹಾಗೂ ಫ್ಲ್ಯಾಟ್ ಪಡೆದು ನಿಮ್ಮ ಜೀವನ ನಿರ್ವಹಣೆ ಸ್ವತಃ ಮಾಡಿಕೊಳ್ಳಬಹುದು ಎಂದರು. “ನೀವು ವಿದ್ಯಾವಂತರಾಗಿದ್ದೀರಿ, ನೀವು ನಿಮಗಾಗಿ ಭಿಕ್ಷೆ ಬೇಡಬಾರದು. ನೀವು ನಿಮಗಾಗಿ ಸಂಪಾದಿಸಬೇಕು ಮತ್ತು ತಿನ್ನಬೇಕು” ಎಂದು ಅವರು ಹೇಳಿದರು.
ಮಹಿಳೆ ತನ್ನ ಪತಿ ತುಂಬಾ ಶ್ರೀಮಂತ ಎಂದು ಪ್ರತಿವಾದಿಸಿದರು, ನಾನು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದೇನೆ ಎಂದು ಆರೋಪಿಸಿ ಮದುವೆಯನ್ನು ರದ್ದುಗೊಳಿಸಲು ಸಹ ಪ್ರಯತ್ನಿಸಿದ್ದಾರೆ. “ನಾನು ನಿಮಗೆ ಸ್ಕಿಜೋಫ್ರೇನಿಯಾದಂತೆ ಕಾಣುತ್ತೇನೆಯೇ?” ಎಂದು ಅವರು ಪೀಠವನ್ನು ಪ್ರಶ್ನಿಸಿದರು.
ಪತಿಯ ಪರವಾಗಿ ಹಾಜರಾದ ಹಿರಿಯ ವಕೀಲೆ ಮಾಧವಿ ದಿವಾನ್, ಜೀವನಾಂಶವನ್ನು ಅಷ್ಟೊಂದು ಪ್ರಮಾಣದಲ್ಲಿ ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದರು. ಮಹಿಳೆ ಈಗಾಗಲೇ ಎರಡು ಪಾರ್ಕಿಂಗ್ ಸ್ಥಳಗಳನ್ನು ಹೊಂದಿರುವ ಮುಂಬೈ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.
ಅದರಿಂದ ಆದಾಯವನ್ನು ಗಳಿಸಬಹುದು ಎಂದು ಅವರು ಗಮನಸೆಳೆದರು. ಆಕೆಯೂ ಕೆಲಸ ಮಾಡಬೇಕು. ಎಲ್ಲವನ್ನೂ ಈ ರೀತಿ ಬೇಡಿಕೆ ಇಡಲಾಗುವುದಿಲ್ಲ” ಎಂದು ಅವರು ಹೇಳಿದರು. ಮಹಿಳೆ ಕನಸು ಕಾಣುತ್ತಿರುವ BMW 10 ವರ್ಷ ಹಳೆಯದು ಮತ್ತು ಅದನ್ನು ನಿಲ್ಲಿಸಲಾಗಿದೆ ಎಂದು ದಿವಾನ್ ಹೇಳಿದರು.
ವಿಚಾರಣೆ ಮುಗಿದಂತೆ, ನ್ಯಾಯಾಲಯವು ಮಹಿಳೆಗೆ ಎರಡು ಆಯ್ಕೆಗಳನ್ನು ನೀಡಿತು. ಫ್ಲಾಟ್ ಸ್ವೀಕರಿಸಿ ಅಥವಾ 4 ಕೋಟಿ ರೂ.ಗಳನ್ನು ಪಡೆದು ಪುಣೆ, ಹೈದರಾಬಾದ್ ಅಥವಾ ಬೆಂಗಳೂರಿನಂತಹ ಐಟಿ ಹಬ್‌ಗಳಲ್ಲಿ ಉದ್ಯೋಗವನ್ನು ಪಡೆಯಿರಿ ಎಂದು ತಿಳಿಸಿದೆ.