ಸಿಗಂದೂರು, ಕೊಲ್ಲೂರು! ಇನ್ಮೇಲೆ ಇನ್ನು ಹತ್ತಿರ!

0
51

 

Connecting Sigandur Kollur ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು ನನಸಾಗುವ ಸಮಯ ಬಂದಿದೆ. ಬಹುನಿರೀಕ್ಷಿತ ಸಿಗಂಧೂರು ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನೇನು 24 ಗಂಟೆಗಳಲ್ಲಿ ಈ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಆರು ದಶಕಗಳ ಕಾಲದ ನಿರಂತರ ಹೋರಾಟ ಮತ್ತು ಕಾಯುವಿಕೆಗೆ ಕೊನೆ ಸಿಕ್ಕಿದ ಸಂಭ್ರಮದಲ್ಲಿ ಶರಾವತಿ ಹಿನ್ನೀರು ಭಾಗದ ಜನರು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಸೇತುವೆಯಲ್ಲ, ಆ ಭಾಗದ ಜನರ ಬದುಕಿಗೆ ಹೊಸ ಆಶಾಕಿರಣ.

 

ಶರಾವತಿ ಹಿನ್ನೀರು ಭಾಗದ ಜನರ ಜೀವನಕ್ಕೆ ಹೊಸ ತಿರುವು

ನಾಡಿನ ಬೆಳಕಿಗಾಗಿ ತಮ್ಮ ಅಮೂಲ್ಯವಾದ ಹೊಲ, ಗದ್ದೆ, ಮನೆ ಎಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಹಿನ್ನೀರು ಪ್ರದೇಶಗಳಾದ ಕರೂರು, ಬಾರಂಗಿ ಹೋಬಳಿಯ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರ ಬದುಕಿಗೆ ಇದುವರೆಗೂ ಲಾಂಚ್ ಒಂದೇ ಆಧಾರವಾಗಿತ್ತು. ಅಷ್ಟೇ ಅಲ್ಲದೆ, ನಾಡಿನ ಪ್ರಸಿದ್ಧ ಸಿಗಂದೂರು ದೇವಾಲಯಕ್ಕೆ ಸಂಪರ್ಕ ಸಾಧಿಸಲೂ ಲಾಂಚ್ ಅವಲಂಬಿಸಬೇಕಿತ್ತು. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಮಾತ್ರ ತಾಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಸಾಧ್ಯವಿತ್ತು. ಸಂಜೆ ಆರು ಗಂಟೆಯ ನಂತರ ಲಾಂಚ್ ಸ್ಥಗಿತಗೊಂಡರೆ ಹಿನ್ನೀರು ಭಾಗದ ಜನರು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದರು. ತೀರಾ ಅನಿವಾರ್ಯತೆ ಇದ್ದರೆ ಸುಮಾರು 85 ಕಿಲೋಮೀಟರ್ ಸುತ್ತಿ ಸಾಗರ ತಾಲೂಕು ಕೇಂದ್ರಕ್ಕೆ ಬರಬೇಕಿತ್ತು.

 

ಈ ಅನಿವಾರ್ಯತೆಯನ್ನು ಹೋಗಲಾಡಿಸಲು ಕಳೆದ ಹಲವು ದಶಕಗಳಿಂದ ಶರಾವತಿ ಹಿನ್ನೀರು ಭಾಗದ ಜನರು ಕಳಸವಳ್ಳಿ-ಅಂಬಾರಗೋಡ್ಲು-ಸಿಗಂಧೂರು ಸೇತುವೆ ನಿರ್ಮಾಣಕ್ಕೆ ಒತ್ತಾಯಿಸುತ್ತಾ ಬರುತ್ತಿದ್ದರು. ಜಿಲ್ಲೆಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಇಚ್ಛಾಶಕ್ತಿ ಮತ್ತು ನಿರಂತರ ಪ್ರಯತ್ನದ ಫಲವಾಗಿ 2019ರಲ್ಲಿ ಕೇಬಲ್ ಸೇತುವೆ ಕಾಮಗಾರಿ ಪ್ರಾರಂಭವಾಯಿತು. ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ 473 ಕೋಟಿ ರೂ. ವೆಚ್ಚದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ್ದರು.

Connecting Sigandur Kollur  ಬೃಹತ್ ಸೇತುವೆಯ ನಿರ್ಮಾಣ ಮತ್ತು ಅದರ ವೈಶಿಷ್ಟ್ಯಗಳು

ಈ ಸೇತುವೆಯು ಸುಮಾರು 2.14 ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲವನ್ನು ಹೊಂದಿದೆ. 473 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ, ಕೊರೊನಾ ಸಾಂಕ್ರಾಮಿಕ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣದಿಂದಾಗಿ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ಕಾಮಗಾರಿ ನಂತರ ವೇಗ ಪಡೆದು ಈಗ ಲೋಕಾರ್ಪಣೆಗೊಳ್ಳುತ್ತಿದೆ. ಸೇತುವೆ ನಿರ್ಮಾಣಕ್ಕಾಗಿ ಜಿಲ್ಲಾ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 369ಎ ಆಗಿ ಪರಿವರ್ತನೆ ಮಾಡಿ ಸೇತುವೆ ನಿರ್ಮಾಣ ಮಾಡಲಾಗಿದೆ. ಇದು ನಿಜಕ್ಕೂ ಐತಿಹಾಸಿಕ ಸೇತುವೆ ಆಗಲಿದೆ ಎಂದು ಸಂಸದ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

 

ಕರ್ನಾಟಕದ ಎರಡು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ Connecting Sigandur Kollur 

ಈ ಸೇತುವೆಯು ಕರ್ನಾಟಕದ ಎರಡು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮತ್ತು ಸಿಗಂಧೂರು ದೇವಸ್ಥಾನಗಳನ್ನು ಸಂಪರ್ಕಿಸಲಿದೆ. 2.14 ಕಿ.ಮೀ. ಉದ್ದದ ಈ ಸಿಗಂಧೂರು ಕೇಬಲ್ ಸೇತುವೆ 24 ಗಂಟೆಯಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 2ನೇ ಅತಿದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ.

ಆರು ದಶಕಗಳಿಂದ ಸಂಚಾರದ ಮೂಲಭೂತ ಸೌಕರ್ಯಗಳನ್ನೇ ಕಾಣದೆ ಬದುಕುತ್ತಿದ್ದ ಶರಾವತಿ ಹಿನ್ನೀರು ಭಾಗದ ಜನ ತಮ್ಮ ಮನೆಯ ಹಬ್ಬದ ಸಂಭ್ರಮದಂತೆ ಸೇತುವೆ ಲೋಕಾರ್ಪಣೆಯನ್ನು ಆಚರಿಸುತ್ತಿದ್ದಾರೆ. ಊರಿನ ಜನರು ತಾವೇ ಸ್ವಯಂ ಪ್ರೇರಿತರಾಗಿ ಸೇತುವೆಗೆ ತೋರಣ, ಬಾಳೆದಿಂಡು ಕಟ್ಟಿ ಸ್ವಾತಂತ್ರ್ಯ ಸಿಕ್ಕಷ್ಟೇ ಸಂಭ್ರಮಿಸುತ್ತಿದ್ದಾರೆ. ಅಂತಿಮ ಹಂತದ ಸೇತುವೆ ಲೋಕಾರ್ಪಣೆಯ ಕೆಲಸವನ್ನು ಸಂಸದ ರಾಘವೇಂದ್ರ ಅವರು ವೀಕ್ಷಿಸಿ, ಸೇತುವೆ ಮೇಲೆ ಸಾರ್ಥಕದ ಹೆಜ್ಜೆ ಇಟ್ಟು ಸಂತಸ ವ್ಯಕ್ತಪಡಿಸಿದರು.