ಸಿಗಂದೂರು ಸೇತುವೆಗೆ ಬಿ.ಎಸ್. ಯಡಿಯೂರಪ್ಪ ಹೆಸರಿಡಿ
*ಹೈಕೊರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ – ಜಿಲ್ಲೆಗೆ ಬಿಎಸ್‌ವೈ ನೀಡಿದ ಕೊಡುಗೆ ಪರಿಗಣಿಸಲು ಮನವಿ*
ಶಿವಮೊಗ್ಗ:- ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರಿಡಲು ಕೋರಿ ಹೈಕೊರ್ಟ್‌ನಲ್ಲಿ ರಿಟ್ ಪಿಟಿಷನ್ ಅರ್ಜಿ ದಾಖಲಾಗಿದೆ.
ಸಾಗರದ ರೈತರಾದ ಹರನಾಥರಾವ್ ಅವರು ಈ ಅರ್ಜಿ ಸಲ್ಲಿಸಿದ್ದು, ಬಹುತೇಕ ನಾಳೆ ಈ ಅರ್ಜಿ ವಿಚಾರಣೆ ಹೈಕೊರ್ಟ್‌ನಲ್ಲಿ ನಡೆಯಲಿದೆ.
ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ಸಿಗಂದೂರು ಸೇತುವೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಪರಿಗಣಿಸಿ ಈಗ ಉದ್ಘಾಟನೆಗೆ ಸಿದ್ದವಾಗಿರುವ ಸಿಗಂದೂರು ಸೇತುವೆಗೆ ಯಡಿಯೂರಪ್ಪನವರ ಹೆಸರನ್ನು ನಾಮಕರಣ ಮಾಡಬೇಕೆಂದು ಕೋರಿದ್ದಾರೆ.
ಶಿವಶ್ರೀನಿವಾಸ್ ಮತ್ತು ಸಂತೋಷ್ ಈ ಇಬ್ಬರು ವಕೀಲರು ಈ ಕುರಿತು ವಾದ ಮಂಡಿಸುತ್ತಿದ್ದಾರೆ. ನ್ಯಾ. ಸುನೀತಾ ದತ್ತ ಯಾದವ್ ಈ ಕುರಿತು ತೀರ್ಪು ನೀಡಲಿದ್ದಾರೆ.
ಈ ಸಂಬಂಧ ಹರನಾಥರಾವ್ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದು, ಜು.೧೪ರಂದು ಉದ್ಘಾಟನೆಯಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವ ಸಿಗಂದೂರು ಸೇತುವೆಗೆ ಬಿ.ಎಸ್. ಯಡಿಯೂರಪ್ಪನವರ ಹೆಸರಿಡುವಂತೆ ಮನವಿ ಮಾಡಿದ್ದಾರೆ.
ಸುಮಾರು ೪೨೪ ಕೋಟಿರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿಗಂದೂರು ಸೇತುವೆ ೧೬ ಮೀ. ಅಗಲ, ೨ಕಾಲು ಕಿ.ಮೀ. ಉದ್ದ ಇದ್ದು ದೇಶದಲ್ಲಿ ಕೇಬಲ ಆಧಾರಿತ ೨ನೇ ಅತಿ ದೊಡ್ಡ ಸೇತುವೆಯಾಗಿದೆ.
ಜು.೧೪ ರಂದು ಈ ಸೇತುವೆಯನ್ನು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಲೋಕಾರ್ಪಣೆ ಮಾಡುವರು. ಈಗಾಗಲೇ ಇದಕ್ಕೆ ಸಿದ್ಧತೆ ನಡೆದಿದೆ.
ಅಲ್ಲದೇ ಸಂಸದ ಬಿ.ವೈ. ರಾಘವೇಂದ್ರ ಅವರು ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರಿಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ನಡುವೆ ಬಿ.ಎಸ್. ಯಡಿಯೂರಪ್ಪನವರ ಹೆಸರು ಕೇಳಿ ಬರುತ್ತಿದೆ.
ಶಿವಮೊಗ್ಗದ ವಿಮಾನ ನಿಲ್ದಾಣಕ್ಕೂ ಯಡಿಯೂರಪ್ಪನವರ ಹೆಸರಿಡುವ ಬೇಡಿಕೆ ಮುನ್ನೆಲೆಗೆ ಬಂದಿತ್ತು. ಆದರೆ ಅಂತಿಮವಾಗಿ ಯಡಿಯೂರಪ್ಪನವರೇ ರಾಷ್ಟ್ರಕವಿ ಕುವೆಂಪು ಹೆಸರನ್ನು ಸೂಚಿಸಿ ಗೊಂದಲಕ್ಕೆ ತೆರೆ ಎಳೆದಿದ್ದರು.
ಈಗ ಇಂತದ್ದೇ ಪರಿಸ್ಥಿತಿ ಮತ್ತೆ ಎದುರಾಗಿದ್ದು, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕೊಡುಗೆಗಳನು ನೀಡಿದ ಯಡಿಯೂರಪ್ಪನವರ ಹೆಸರನ್ನು ಜಿಲ್ಲೆಯ ವಿಶೇಷ ಸೇತುವೆಗೆ ಇಡುವ ಒತ್ತಾಯ ಕೇಳಿ ಬರುತ್ತಿದೆ.