ಶಿವಮೊಗ್ಗ : ಬೇಸಿಗೆ ಮಳೆಗೆ ಗರಿಷ್ಠ ಮಟ್ಟದತ್ತ ತುಂಗಾ ಡ್ಯಾಂ..!*. ಶಿವಮೊಗ್ಗ (shivamogga), ಮೇ 24: ಮಲೆನಾಡಿನಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ನಡುವೆ ಕಡಿಮೆ ವ್ಯಾಪ್ತಿ, ವಿಸ್ತೀರ್ಣ ಹೊಂದಿರುವ ಶಿವಮೊಗ್ಗ ತಾಲೂಕಿನ ತುಂಗಾ ಡ್ಯಾಂ ಮಳೆಗಾಲ ಆರಂಭಕ್ಕೂ ಮುನ್ನವೇ ಗರಿಷ್ಠ ಮಟ್ಟಕ್ಕೆ ಬರಲಾರಂಭಿಸಿದೆ! ಮೇ 24 ರ ಬೆಳಿಗ್ಗೆಯ ಮಾಹಿತಿಯಂತೆ, ತುಂಗಾ ಜಲಾಶಯದ ನೀರಿನ ಮಟ್ಟ 587. 84 (ಗರಿಷ್ಠ ಮಟ್ಟ : 588. 24 ) ಮೀಟರ್ ಇದೆ. 261 ಕ್ಯೂಸೆಕ್ ಒಳಹರಿವಿದೆ ಎಂದು ತುಂಗಾ ಡ್ಯಾಂ ಎಂಜಿನಿಯರ್ ತಿಪ್ಪಾನಾಯ್ಕ್ ಅವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ಕೇವಲ ಸುಮಾರು 1 ಅಡಿಯಷ್ಟು ನೀರು ಬಾಕಿಯಿದೆ. ಪ್ರಸ್ತುತ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಚುರುಕುಗೊಂಡಿರುವುದರಿಂದ, ಶೀಘ್ರವೇ ಡ್ಯಾಂ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ.ಜಲಾಶಯದ ನೀರು ಸಂಗ್ರಹಣ ಸಾಮರ್ಥ್ಯ 3. 24 ಟಿಎಂಸಿಯಾಗಿದೆ. 22 ಕ್ರಸ್ಟ್ ಗೇಟ್ ಗಳಿವೆ. ಮಲೆನಾಡು ಭಾಗದ ಪ್ರಮುಖ ಜಲಾಶಯಗಳಲ್ಲೊಂದಾಗಿದೆ.
ಮಳೆ ಚುರುಕು : ವಾಯುಭಾರ ಕುಸಿತದ ಪರಿಣಾಮದಿಂದ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಕಳೆದ ಕೆಲ ದಿನಗಳಿಂದ ಹಲವೆಡೆ ಮಳೆಗಾಲದ ವಾತಾವರಣ ಕಂಡುಬಂದಿದೆ. ತಾಪಮಾನದ ಪ್ರಮಾಣದಲ್ಲಿ ದಿಢೀರ್ ಕುಸಿತವಾಗಿದೆ.
ತುಂಗಾ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ!
ತುಂಗಾ ಜಲಾಶಯದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ಕಾರಣದಿಂದ ತುಂಗಾ ಡ್ಯಾಂನ ಒಳಹರಿವು ಹೆಚ್ಚಿದೆ. ಈ ಕಾರಣದಿಂದ ಯಾವ ಸಮಯದಲ್ಲಾದರೂ ತುಂಗಾ ಡ್ಯಾಂನಿಂದ ನೀರು ಹೊರಬಿಡುವ ಸಾಧ್ಯತೆಯಿದೆ. ಈ ಕಾರಣದಿಂದ ತುಂಗಾ ಡ್ಯಾಂ ಕೆಳಭಾಗದ ನದಿ ಪಾತ್ರದಲ್ಲಿ ಸಾರ್ವಜನಿಕರು ಯಾವುದೇ ಚಟುವಟಿಕೆ ನಡೆಸಬಾರದು. ಹಾಗೂ ಜಾನುವಾರುಗಳನ್ನು ಬಿಡಬಾರದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಪ್ರಕಟಣೆಯಲ್ಲಿ ತಿಳಿಸಿದೆ.