ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ (ರಿ) ಕಾವಲುಪಡೆ ಶಿವಮೊಗ್ಗ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಇಂದು ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಹೆಚ್. ಸುರೇಶ್ ಅವರು, ಶಿವಮೊಗ್ಗದ ಜನರು ಅತ್ಯಂತ ಸ್ವಾಭಿಮಾನಿಗಳು. ತಮ್ಮ ಸಂಕಷ್ಟಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುವ ಗುಣ ಹೊಂದಿದ್ದಾರೆ. ಈ ಹಿನ್ನೆಲೆ ಕೆಲ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸಿ ಸಾಮಾನ್ಯ ಜನರಿಗೆ ಅನ್ಯಾಯ ಮಾಡುತ್ತಿರುವುದು ವಿಷಾದನೀಯ ಎಂದರು. “ಹಣ ಗಳಿಸುವುದಕ್ಕಿಂತ ಜನರ ವಿಶ್ವಾಸ ಮತ್ತು ಬೆಂಬಲ ಗಳಿಸುವುದು ಮುಖ್ಯ. ನಾವು ಸತ್ತಾಗ ನಮ್ಮ ಹಿಂದೆ ಎಷ್ಟು ಜನ ಬರುತ್ತಾರೆ ಎಂಬುದನ್ನು ದೇವರು ನಿರ್ಧರಿಸುತ್ತಾನೆ. ಆದ್ದರಿಂದ ಜನಪರ ಸೇವೆಯ ಮೂಲಕ ಜನರ ಮನ ಗೆಲ್ಲಬೇಕು,” ಎಂದು ಅವರು ಕರೆ ನೀಡಿದರು.
ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್.ಬಿ. ಮಾತನಾಡಿ, ರಾಜ್ಯಾಧ್ಯಕ್ಷರ ಹೋರಾಟದ ಹಾದಿಯೇ ನಮಗೆ ದಾರಿದೀಪವಾಗಿದೆ. ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗದಲ್ಲಿ ಹೋರಾಟವನ್ನು ಮುಂದುವರಿಸುತ್ತೇವೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮನೆಗಳಲ್ಲಿ ನಡೆಯುತ್ತಿದ್ದ ತರಗತಿಗಳನ್ನು ನಮ್ಮ ಹೋರಾಟದ ಫಲವಾಗಿ ಸ್ಥಗಿತಗೊಳಿಸಲಾಗಿದೆ. ಕೆಲವು ಶಾಲೆಗಳು ಅಗತ್ಯ ಸೌಕರ್ಯಗಳನ್ನು ಒದಗಿಸಲು ಮುಂದಾಗಿವೆ ಎಂದರು. ಜೊತೆಗೆ ಶಿವಮೊಗ್ಗದಲ್ಲಿ “ಬಂಗಾರಪ್ಪ ವೃತ್ತ” ಎಂಬ ಹೆಸರಿಡುವ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಜಿಲ್ಲಾ ಅಧ್ಯಕ್ಷರಾದ ಶಾರದಾ ಶ್ರೀಧರಮೂರ್ತಿ ಅವರು ಮಾತನಾಡಿ, ರಾಷ್ಟ್ರೀಯ ಸಂಘಟನೆ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಈ ಸಂಘಟನೆಯ ಮೂಲಕ ಸಂಕಷ್ಟದಲ್ಲಿರುವ ಜನರ ಪರವಾಗಿ ಕೆಲಸ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಮುಂದಿನ ಹೋರಾಟಗಳ ಕುರಿತು ರೂಪರೇಷೆ ಸಿದ್ಧಪಡಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ (ರಿ) ಕಾವಲುಪಡೆ ಈಗಾಗಲೇ 14 ಜಿಲ್ಲೆಗಳಲ್ಲಿ ತನ್ನ ಕಾರ್ಯವಿಸ್ತಾರ ಮಾಡಿದ್ದು, ಶಿವಮೊಗ್ಗದಲ್ಲಿಯೂ ಜನಪರ ಹೋರಾಟವನ್ನು ಬಲಪಡಿಸುವ ಉದ್ದೇಶ ವ್ಯಕ್ತವಾಯಿತು.
ನೂತನ ಪದಾಧಿಕಾರಿಗಳು: ಜಿಲ್ಲಾ ಗೌರವ ಅಧ್ಯಕ್ಷರು – ವಿ. ಮೂರ್ತಿ (ಜ್ವಾಲಾಮುಖಿ)
ಜಿಲ್ಲಾಧ್ಯಕ್ಷರು – ಶಿವಕುಮಾರ್ ಎಸ್.ಬಿ
ಜಿಲ್ಲಾ ಉಪಾಧ್ಯಕ್ಷರು – ರಮೇಶ್, ಮಲ್ಲಿಗೆನಹಳ್ಳಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ – ಕೆ.ಬಿ. ಉಮೇಶ್
ಜಿಲ್ಲಾ ಸಂಘಟನ ಕಾರ್ಯದರ್ಶಿ – ಜಗದೀಶ್ ವೈ.ಎಸ್.
ಮಹಿಳಾ ಜಿಲ್ಲಾ ಅಧ್ಯಕ್ಷರು – ಶಾರದಾ ಶ್ರೀಧರಮೂರ್ತಿ
ಜಿಲ್ಲಾ ಉಪಾಧ್ಯಕ್ಷರು – ಅನ್ನಪೂರ್ಣ ಡಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ – ಶಿಲ್ಪಾ ಎನ್.ಪಿ
ಕಾರ್ಯಕ್ರಮದಲ್ಲಿ ಸಂಘಟನೆಯ ಹಲವು ಕಾರ್ಯಕರ್ತರು ಭಾಗವಹಿಸಿ, ಸಂಘಟನೆಯ ಬಲವರ್ಧನೆಗೆ ಬದ್ಧತೆ ವ್ಯಕ್ತಪಡಿಸಿದರು.








